ADVERTISEMENT

ಮೋದಿ ಹೊಗಳಿಕೆ ಈಗಲೇ ಬೇಡ: ತರೂರ್‌ಗೆ ದಿಗ್ವಿಜಯ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 19:30 IST
Last Updated 6 ಜೂನ್ 2014, 19:30 IST

ನವದೆಹಲಿ(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್‌ ವಕ್ತಾರ ಶಶಿ ತರೂರ್‌ ಅವರಿಗೆ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರು, ‘ಮೋದಿ ಬಗ್ಗೆ ಈಗಲೇ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ’ ಎಂದು ಶುಕ್ರವಾರ ಸಲಹೆ ನೀಡಿದ್ದಾರೆ.

‘ಮೋದಿ ಪ್ರಧಾನಿಯಾದ ಬಳಿಕದ ಅವರ ಸ್ವಭಾವದ ಕುರಿತು ಈಗಲೇ ತೀರ್ಮಾನ ಮಾಡಬಾರದು, ಕಾದು ನೋಡಬೇಕು’ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷ ಗುರುವಾರ ‘ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಶಶಿ ತರೂರ್‌ ನೀಡಿದ ಹೇಳಿಕೆ ಅವರ ವೈಯಕ್ತಿಕ ಅನಿಸಿಕೆ’ ಎಂದು ಹೇಳಿ ಅಂತರ ಕಾಯ್ದುಕೊಂಡಿತ್ತು. ಅಲ್ಲದೇ ಕಾಂಗ್ರೆಸ್‌ ಹಿರಿಯ ಮುಖಂಡ ಮಣಿಶಂಕರ್‌ ಅಯ್ಯರ್‌ ಅವರು  ಶಶಿ ತರೂರ್‌ ಅವರು ‘ಅಪ್ರಬುದ್ಧ, ಗೋಸುಂಬೆ ಸ್ವಭಾವದ ವ್ಯಕ್ತಿ’ ಎಂದು ಟೀಕಿಸಿದ್ದರು.

ತರೂರ್‌ ಸಮರ್ಥನೆ: ಪಕ್ಷದೊ ಳ­ಗಿನಿಂದ ತೀವ್ರ ಟೀಕೆಗೆ ಒಳಗಾಗಿರುವ ಶಶಿ ತರೂರ್‌  ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ. ಪಕ್ಷ ಮತ್ತು ಜಾತ್ಯತೀತ ಸಿದ್ಧಾಂತಗಳಿಗೆ ಬದ್ಧವಾಗಿ-­ದ್ದೇನೆ ಎಂದು ತಿಳಿಸಿದ್ದಾರೆ.

‘ಕೆಲವು ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುವುದರಿಂದ ಅವರ ವರ್ತನೆ ಹೀಗೆಯೇ ಮುಂದುವರಿಯಲಿ ಎಂದು ಜನರಲ್ಲಿ ನಿರೀಕ್ಷೆ ಮೂಡಿಸುವುದು ಸಾಧ್ಯವಾಗುತ್ತದೆ. ಹಾಗೆಯೇ ಮುಂದೆ ಅವರನ್ನು ಅಳೆಯುವ ಮಾನದಂಡ­ವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದಂತಾ­ಗುತ್ತದೆ’ ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥ ಅಜಯ್‌ ಮಾಕನ್‌ ಅವರಿಗೆ ಬರೆದ ಪತ್ರದಲ್ಲಿ ತರೂರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.