ADVERTISEMENT

ಮ್ಯಾಗಿ ನೂಡಲ್ಸ್‌ನಲ್ಲಿ ವಿಷಕಾರಿ ಅಂಶ

ಅಮಿತಾಭ್‌, ಮಾಧುರಿ, ಪ್ರೀತಿ ವಿರುದ್ಧ ಎಫ್‌ಐಆರ್‌ಗೆ ಆದೇಶ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 19:30 IST
Last Updated 2 ಜೂನ್ 2015, 19:30 IST

ನವದೆಹಲಿ (ಪಿಟಿಐ): ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್‌ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚಾರ ರಾಯಭಾರಿಗಳಾದ ಬಾಲಿವುಡ್ ನಟ ಅಮಿತಾಭ್‌ ಬಚ್ಚನ್, ನಟಿ ಮಾಧುರಿ ದೀಕ್ಷಿತ್, ನಟಿ ಪ್ರೀತಿ ಜಿಂಟಾ ಹಾಗೂ  ನೆಸ್ಲೆಯ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬಿಹಾರದ ನ್ಯಾಯಾಲಯ ಪೊಲೀಸರಿಗೆ ಮಂಗಳವಾರ ಆದೇಶಿಸಿದೆ.

ಮ್ಯಾಗಿ ನೂಡಲ್ಸ್‌ನ ಮಾದರಿಗಳು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ದೆಹಲಿ ಸರ್ಕಾರ ತಿಳಿಸಿದ್ದರೆ, ಸರ್ಕಾರಿ ಸ್ವಾಮ್ಯದ ಮಳಿಗೆಗಳಲ್ಲಿ ಈ ಉತ್ಪನ್ನಗಳನ್ನು  ಕೇರಳ ಸರ್ಕಾರ ನಿಷೇಧಿಸಿದೆ. ಹರಿಯಾಣ ಸರ್ಕಾರ ಉತ್ಪನ್ನದ ಮಾದರಿ ಪರೀಕ್ಷಿ­ಸಲು ನಿರ್ಧರಿಸಿದೆ.

ಬಿಹಾರದದ ಮುಜಫ್ಪರ್‌ಪುರದ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ರಾಮಚಂದ್ರ ಪ್ರಸಾದ್‌ ಅವರು ನೆಸ್ಲೆಯ 2 ಅಧಿಕಾರಿಗಳು ಮತ್ತು ಬಾಲಿವುಡ್‌ನ ಮೂವರು ಕಲಾವಿದರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ದೂರಿನ ಬಗ್ಗೆ ತನಿಖೆ ನಡೆಸುವಂತೆ  ಕಾಜಿ ಮೊಹಮ್ಮದ್‌ಪುರ ಪೊಲೀಸರಿಗೆ ಸೂಚಿಸಿದ್ದಾರೆ.

ತನಿಖೆಗೆ ಅಗತ್ಯವಿದ್ದರೆ ಐದು ಜನರನ್ನು ಬಂಧಿಸಲೂಬಹುದು ಎಂದು ಕೋರ್ಟ್‌ ಹೇಳಿದೆ.

ರಾಜ್ಯದಲ್ಲೂ ಪರೀಕ್ಷೆ
ಮ್ಯಾಗಿ, ಟಾಪ್‌ರಾಮನ್‌ ಸೇರಿದಂತೆ ವಿವಿಧ ಹೆಸರಿನ ನೂಡಲ್ಸ್‌ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ನಂತರ ನಿಷೇಧ ಕುರಿತು ತೀರ್ಮಾನ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಮಂಗಳವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.