ADVERTISEMENT

ಯಾದವ್‌, ಭೂಷಣ್‌ ಉಚ್ಚಾಟನೆ ಸಂಭವ

‘ಎಎಪಿ’ ಬಣ ರಾಜಕೀಯ ತಾರಕಕ್ಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

ನವದೆಹಲಿ:‘ಆಮ್‌ ಆದ್ಮಿ ಪಾರ್ಟಿ’ಯ ಹಿರಿಯ ಮುಖಂಡರಾದ ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದಲೂ ತೆಗೆದು ಹಾಕಲು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿಷ್ಠರ ಬಣ ಗುರುವಾರ ತೀರ್ಮಾನಿಸಿದೆ.

ಅರವಿಂದ್‌ ಕೇಜ್ರಿವಾಲ್‌ ಮನೆಯಲ್ಲಿ ನಡೆದ ಎಎಪಿ ರಾಜಕೀಯ ವ್ಯವಹಾರ ಗಳ ಸಮಿತಿ (ಪಿಎಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷದ ಎರಡೂ ಬಣಗಳ ನಾಯಕರ ನಡುವಣ ಕಿತ್ತಾಟವನ್ನು ಕೊನೆಗಾಣಿಸುವ ಸಂಬಂಧ ನಡೆದ ಚರ್ಚೆ ವಿಫಲವಾದ ಬಳಿಕ ಇಬ್ಬರೂ ಹಿರಿಯ ನಾಯಕರನ್ನು ಪಕ್ಷದಿಂದ ಹೊರ ಹಾಕಲು ತೀರ್ಮಾನಿಸಲಾಯಿತು.

ಯೋಗೇಂದ್ರ ಯಾದವ್‌ ಹಾಗೂ ಪ್ರಶಾಂತ್‌ ಭೂಷಣ್‌ ಅವರನ್ನು ಹೊರಗೆ ಹಾಕುವವರೆಗೂ ತಾವು ಪಕ್ಷದಲ್ಲಿ ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸುವುದಿಲ್ಲ ಎಂದು ಎಎಪಿ ಸಂಚಾಲಕರೂ ಆದ ಕೇಜ್ರಿವಾಲ್‌ ಪಟ್ಟು ಹಿಡಿದಿದ್ದರು. ದೆಹಲಿ ಮುಖ್ಯಮಂತ್ರಿ ಜತೆ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಯಾದವ್‌ ಮತ್ತು ಭೂಷಣ್‌ ಅವರನ್ನು ಇತ್ತೀಚೆಗಷ್ಟೇ ಪಿಎಸಿಯಿಂದ ತೆಗೆದು ಹಾಕಲಾಗಿತ್ತು. ಈಗ ಪಕ್ಷದ ಎಲ್ಲ ಹುದ್ದೆಗಳಿಂದಲೂ ಅವರನ್ನು ಕೈಬಿಡಲಾಗಿದೆ.

ಯೋಗೇಂದ್ರ ಯಾದವ್‌ ಹಾಗೂ ಪ್ರಶಾಂತ್‌ ಭೂಷಣ್‌ ಎಎಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದ್ದಾರೆ. ಇಬ್ಬರೂ ಮುಖಂಡರೊಂದಿಗೆ ಇನ್ನು ಮುಂದೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲವೆಂದು  ಕೇಜ್ರಿವಾಲ್‌ ಬಣದ ನಾಯಕ ಆಶೀಶ್‌ ಖೇತಾನ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಆಶೀಶ್‌ ಖೇತಾನ್‌ ಹೇಳಿಕೆಗೆ ಯೋಗೇಂದ್ರ ಯಾದವ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಾವು ಎತ್ತಿರುವ ಐದು ಪ್ರಶ್ನೆಗಳನ್ನು ಪರಿಹರಿಸಿದರೆ ರಾಜೀನಾಮೆ ಕೊಡಲು ಸಿದ್ಧ ಎಂದು ಬರೆದಿರುವ ಪತ್ರವನ್ನೇ ಎಎಪಿ ನಾಯಕರು  ರಾಜೀನಾಮೆ ಪತ್ರ ಎಂದು ಪ್ರಚಾರ ಮಾಡಿದ್ದಾರೆ’ ಎಂದು ಆರೋಪಿಸಿ ದ್ದಾರೆ. ಈ ಸಂಬಂಧ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಹೊರ ಹಾಕುವ ಎಚ್ಚರಿಕೆ: ಎಎಪಿ ರಾಜಕೀಯ ವ್ಯವಹಾರಗಳ ಸಮಿತಿ ನಿರ್ಧಾರಕ್ಕೆ ಮೊದಲು ಯೋಗೇಂದ್ರ ಯಾದವ್‌ ಹಾಗೂ ಪ್ರಶಾಂತ್‌ ಭೂಷಣ್‌, ಕೇಜ್ರಿವಾಲ್‌ ಬಣ ರಾಜೀನಾಮೆ ನೀಡುವಂತೆ ತಮ್ಮನ್ನು ಒತ್ತಾಯಿಸುತ್ತಿದೆ. ಗೌರವಯುತವಾಗಿ ರಾಜೀನಾಮೆ ಕೊಡದಿದ್ದರೆ ಪಕ್ಷದಿಂದ ಹೊರ ಹಾಕುವುದಾಗಿ ಎಚ್ಚರಿಕೆ ರವಾನಿಸಿದೆ ಎಂದು ದೂರಿದ್ದರು.

ಇದಕ್ಕೂ ಮೊದಲು ಕೊನೆಯ ಪ್ರಯತ್ನವಾಗಿ ಪಕ್ಷದ ಲೋಕಪಾಲರಾದ ಅಡ್ಮಿರಲ್‌ ರಾಮದಾಸ್‌ ನಡೆಸಿದ ಸಂಧಾನದ ಪ್ರಯತ್ನವೂ ಫಲ ಕೊಡಲಿಲ್ಲ. ಎರಡೂ ಬಣಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಮಾತುಕತೆ ಮುರಿದು ಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.