ADVERTISEMENT

ಯೋಜನೆಗಳ ಅನುಷ್ಠಾನಕ್ಕೆ ಬಂಡವಾಳ ಕ್ರೋಡೀಕರಣ

11,790 ಕೋಟಿ ಸಾಲ ಎತ್ತುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ (ಪಿಟಿಐ): ಯೋಜನೆಗಳ ಅನುಷ್ಠಾನಕ್ಕಾಗಿ ಬಂಡವಾಳ ಕ್ರೋಡೀಕರಣ ಮಾಡಲು ರೈಲ್ವೆ ಹಣಕಾಸು ನಿಗಮ (ಐಆರ್‌ ಎಫ್‌ಸಿ) ಮತ್ತು ರೈಲ್‌ ವಿಕಾಸ್ ನಿಗಮ ನಿಯಮಿತಗಳ (ಆರ್‌ವಿಎನ್‌ಎಲ್‌) ಮೂಲಕ 2014–15ನೇ ಸಾಲಿನಲ್ಲಿ ₨11,790 ಕೋಟಿಗಳಷ್ಟು ಸಾಲ ಎತ್ತುವ ಉದ್ದೇಶ ಇದೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಮಧ್ಯಾಂತರ ಬಜೆಟ್‌ನಲ್ಲಿ ಈ ಉದ್ದೇಶಕ್ಕಾಗಿ ₨13,800 ಕೋಟಿ ಸಾಲ ಎತ್ತುವ ಗುರಿ ಪ್ರಕಟಿಸಲಾಗಿತ್ತು. ಮಂಗಳವಾರ ಲೋಕಸಭೆಯಲ್ಲಿ ಮಂಡನೆಯಾದ ಬಜೆಟ್‌­ನಲ್ಲಿ ಈ ಮೊತ್ತ ₨2010 ಕೋಟಿಗಳಷ್ಟು ಕಡಿಮೆಯಾಗಿದೆ.

ಐಆರ್‌ಎಫ್‌ಸಿಯಿಂದ ₨11,500 ಕೋಟಿ ಮತ್ತು ಆರ್‌ವಿಎನ್‌ಎಲ್‌ ಮೂಲಕ ₨290 ಕೋಟಿ ಒಟ್ಟು ₨11,790 ಕೋಟಿ ಸಾಲ ಎತ್ತುವ ಗುರಿ ಇದೆ ಎಂದ ರೈಲ್ವೆ ಸಚಿವರು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಮೂಲಕ ಸಂಪನ್ಮೂಲ ಸಂಗ್ರಹಿಸುವ ಪ್ರಸ್ತಾವ ಮಧ್ಯಂತರ ಬಜೆಟ್‌ನಲ್ಲಿ­ಇರುವಂತೆಯೇ (₨6,005 ಕೋಟಿ) ಇರುತ್ತದೆ ಎಂದು ಹೇಳಿದ್ದಾರೆ.

2013–14ನೇ ಸಾಲಿನಲ್ಲಿ ಐಆರ್‌­ಎಫ್‌ಸಿ ಮೂಲಕ ₨14,688 ಕೋಟಿ ಮತ್ತು ಆರ್‌ವಿಎನ್‌ಎಲ್‌ ಮೂಲಕ ₨254 ಕೋಟಿ ಸಾಲ ಎತ್ತು­ವಳಿ ಮಾಡಲಾಗಿತ್ತು. ಪ್ರಯಾಣಿ­ಕರ ರೈಲು ಮತ್ತು ಸರಕು ಸಾಗಣೆ­ಯಿಂದ ಸಂಗ್ರಹ­ವಾಗುವ ವರಮಾನವು ಹೆಚ್ಚಿನ ಪ್ರಮಾಣದಲ್ಲಿ  ಇಂಧನ, ವೇತನ, ಪಿಂಚಣಿ, ಹಳಿ ಮತ್ತು ಬೋಗಿ­ಗಳ ನಿರ್ವಹಣೆ, ಸುರಕ್ಷತಾ ಕ್ರಮಗಳಿಗೆ ವೆಚ್ಚವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.