ADVERTISEMENT

ರಂಪಾಟ: ಸಂಸದನಿಗೆ ಇಂಡಿಗೊ ನಿರ್ಬಂಧ

ಪಿಟಿಐ
Published 15 ಜೂನ್ 2017, 19:30 IST
Last Updated 15 ಜೂನ್ 2017, 19:30 IST
ರಂಪಾಟ: ಸಂಸದನಿಗೆ ಇಂಡಿಗೊ ನಿರ್ಬಂಧ
ರಂಪಾಟ: ಸಂಸದನಿಗೆ ಇಂಡಿಗೊ ನಿರ್ಬಂಧ   

ವಿಶಾಖಪಟ್ಟಣ: ತಡವಾಗಿ ಬಂದ ತೆಲುಗು ದೇಶಂ ಪಕ್ಷದ ಸಂಸದ ಜೆ.ಸಿ ದಿವಾಕರ್‌ ರೆಡ್ಡಿ ಅವರಿಗೆ ವಿಮಾನ ಏರಲು ಅವಕಾಶ ನಿರಾಕರಿಸಿದ ಪ್ರಸಂಗ ಆಂಧ್ರಪ್ರದೇಶದ ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಗುರುವಾರ ವರದಿಯಾಗಿದೆ.  ವಿಶಾಖಪಟ್ಟಣದಿಂದ ಬೆಳಿಗ್ಗೆ 8.10ಕ್ಕೆ  ಹೊರಡಬೇಕಿದ್ದ ಇಂಡಿಗೋ 6ಇ– 608 ವಿಮಾನದಲ್ಲಿ ಅವರು ಹೈದರಾಬಾದ್‌ಗೆ ತೆರಳಬೇಕಿತ್ತು.

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಯಮದ ಪ್ರಕಾರ,  ದೇಶಿಯ ವಿಮಾನಗಳು  ಹಾರಾಟ ಆರಂಭಿಸುವ  45 ನಿಮಿಷಕ್ಕೂ ಮುಂಚಿತವಾಗಿ ವಿಮಾನಯಾನ ಸಂಸ್ಥೆಗಳು ತಪಾಸಣಾ ಕೇಂದ್ರಗಳನ್ನು ಮುಚ್ಚಬೇಕು. ಅನಂತಪುರ ಲೋಕಸಭಾ  ಕ್ಷೇತ್ರದ ಸಂಸದ ದಿವಾಕರ್‌ ರೆಡ್ಡಿ ತಡವಾಗಿ ಬಂದಿದ್ದರು. ಹೀಗಾಗಿ ವಿಮಾನ ಏರಲು ಅವಕಾಶ ನೀಡಿಲ್ಲ ಎಂದು ಏರ್‌ಲೈನ್ಸ್‌ನ ಸಿಬ್ಬಂದಿ ತಿಳಿಸಿದ್ದಾರೆ.

‘ತಡವಾಗಿ ಬಂದಿದ್ದರಿಂದ ಬೋರ್ಡಿಂಗ್‌ ಪಾಸ್‌ ನೀಡಲು ಸಾಧ್ಯವಿಲ್ಲ ಎಂದು ವಿಮಾನಯಾನ ಸಂಸ್ಥೆಯ ಸಿಬ್ಬಂದಿ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಅವರು, ತಪಾಸಣಾ ಕೇಂದ್ರದ ಬಳಿಯಿದ್ದ ಇಂಡಿಗೋ ಕಚೇರಿಗೆ ತೆರಳಿ ಗಲಾಟೆ ಮಾಡಿದರು’ ಎಂದು  ಸಂಸ್ಥೆಯ ಮೂಲಗಳು ತಿಳಿಸಿವೆ.

ADVERTISEMENT

ಈ ಕುರಿತು ಇಂಡಿಗೋ ಸಂಸ್ಥೆಯು ತನಿಖೆಗೆ ಆದೇಶಿಸಿದ್ದು, ವಿವರ ನೀಡಲು ನಿರಾಕರಿಸಿದೆ. ‘ಸಂಸ್ಥೆಯ ಸಿಬ್ಬಂದಿ ಹಾಗೂ ಗ್ರಾಹಕರ ಸುರಕ್ಷತೆ ಹಾಗೂ ಭದ್ರತೆ ನಮ್ಮ ಪ್ರಮುಖ ಆದ್ಯತೆ’ ಎಂದು ಸಂಸ್ಥೆಯು ತಿಳಿಸಿದೆ. ದಿವಾಕರ್‌ ರೆಡ್ಡಿ ಅವರು ಇಂಡಿಗೊ ವಿಮಾನಗಳಲ್ಲಿ ಪ್ರಯಾಣಿಸುವುದನ್ನು ನಿರ್ಬಂಧಿಸಿದೆ.

ಕಳೆದ ವರ್ಷವೂ ಕೂಡ ದಿವಾಕರ್‌ ರೆಡ್ಡಿ ಇದೇ ರೀತಿ ವರ್ತಿಸಿದ ಆರೋಪ ಕೇಳಿಬಂದಿತ್ತು. ವಿಜಯವಾಡದ ಗಾನಾವರಂ ವಿಮಾನ ನಿಲ್ದಾಣದಲ್ಲಿ ತಡವಾಗಿ ಬಂದು ವಿಮಾನ ಏರಲು ಅವಕಾಶ ನೀಡದಿದ್ದಾಗ,  ಏರ್‌ ಇಂಡಿಯಾ ಕಚೇರಿಯ ಪಿಠೋಪಕರಣಗಳನ್ನು ಹಾನಿಗೊಳಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.