ADVERTISEMENT

ರಾಜಪಕ್ಸೆಗೆ ಕಪ್ಪು ಬಾವುಟ: ಎಂಡಿಎಂಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2014, 19:30 IST
Last Updated 24 ಮೇ 2014, 19:30 IST

ಚನ್ನೈ (ಪಿಟಿಐ): ನರೇಂದ್ರ ಮೋದಿ ಅವರು ಪ್ರಧಾನಿ­ಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಅತಿಥಿಯಾಗಿ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಆಗಮಿಸುತ್ತಿರುವುದನ್ನು ವಿರೋಧಿಸಲು ದೆಹಲಿಯಲ್ಲಿ 26ರಂದು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ಬಿಜೆಪಿ ಮಿತ್ರ ಪಕ್ಷವಾದ ಎಂಡಿಎಂಕೆ ನಿರ್ಧರಿಸಿದೆ.

ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು ತಮ್ಮ ಪಕ್ಷದ ಈ ಪ್ರತಿಭಟನಾ ಕಾರ್ಯಕ್ರಮವನ್ನು 1965ರಲ್ಲಿ ಸಿ. ಎನ್. ಅಣ್ಣಾದೊರೈ ಅವರು ಹಿಂದಿ ಭಾಷೆಯ ವಿರುದ್ಧ ನಡೆಸಿದ ಚಳವಳಿಗೆ ಹೋಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಅವರ ಅಭೂತ­ಪೂರ್ವ ಯಶಸ್ವಿಗೆ ಅಭಿನಂದನೆ ಸಲ್ಲಿಸಿರುವ ವೈಕೊ, ಶ್ರೀಲಂಕಾದಲ್ಲಿ ತಮಿಳು ಜನಾಂಗೀಯರ ವಿರುದ್ಧದ ನಿಲುವು ತಾಳಿರುವ ರಾಜಪಕ್ಸೆ ಅವರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳು­ವು­ದನ್ನು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ತಮ್ಮ ಪಕ್ಷ ವಿರೋಧಿಸುವು­ದಾಗಿ ತಿಳಿಸಿ­ದ್ದಾರೆ.

ಸೋಮವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಮತ್ತು ಅದೇ ಸಂದರ್ಭದಲ್ಲಿ ಚೆನ್ನೈನಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರಮಾಣ ವಚನ ಸಮಾರಂಭಕ್ಕೆ ರಾಜಪಕ್ಸೆ ಹಾಜರಾದರೆ ಸಮಾರಂಭದ  ಪಾವಿತ್ರ್ಯ ಹಾಳಾಗುತ್ತದೆ ಎಂದು ವೈಕೊ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ನಿಯೋಜಿತ ಪ್ರಧಾನಿ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದ್ದ ವೈಕೊ ಆಕ್ಷೇಪ ವ್ಯಕ್ತಪಡಿಸಿದ್ದರು.
‘ಶ್ರೀಲಂಕಾದಲ್ಲಿಯ ಮಾನವ ಹಕ್ಕು ಉಲ್ಲಂಘನೆ ವಿರುದ್ಧದ ವಿಶ್ವಸಂಸ್ಥೆಯ ಗೊತ್ತುವಳಿ ಮಂಡನೆ ಸಂದರ್ಭದಲ್ಲಿ ಭಾರತ ಗೈರು ಹಾಜರಾಗಲು ಪಟ್ಟಭದ್ರ ಅಧಿಕಾರಿಗಳ ಕುಮ್ಮಕ್ಕೇ ಕಾರಣ’ ಎಂದು ಹೇಳಿರುವ ವೈಕೊ, ‘ಈಗಲೂ ರಾಜಪಕ್ಸೆ ಅವರಿಗೆ ಆಮಂತ್ರಣ ನೀಡುವ ಹಿಂದೆ ಈ ಅಧಿಕಾರಿಗಳೇ ಕೆಲಸ ಮಾಡಿದ್ದು, ಮೋದಿ ಅವರನ್ನು ದಾರಿ ತಪ್ಪಿಸಿದ್ದಾರೆ’ ಎಂದು ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT