ADVERTISEMENT

ರಾಜ್ಯಪಾಲರ ಮೇಲೆ ವಕ್ರದೃಷ್ಟಿ

ಯುಪಿಎ ಅವಧಿಯಲ್ಲಿ ನೇಮಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2014, 19:30 IST
Last Updated 17 ಜೂನ್ 2014, 19:30 IST

ನವದೆಹಲಿ:  ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕಗೊಂಡ ರಾಜ್ಯಪಾಲರಿಗೆ ಹುದ್ದೆಯಲ್ಲಿ ಮುಂದುವರಿಯದಂತೆ ನರೇಂದ್ರ ಮೋದಿ ಅವರ ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಜ್ಯಪಾಲ ಬಿ. ಎಲ್‌. ಜೋಷಿ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜೋಷಿ ಅವರ ಅಧಿಕಾರಾವಧಿ ಕೆಲವು ತಿಂಗಳ ಹಿಂದೆಯೇ ­ ಪೂರ್ಣ­ಗೊಂಡಿತ್ತು. ಯುಪಿಎ–2 ಸರ್ಕಾರ ಅವರನ್ನು ಎರಡನೇ ಅವಧಿಗೂ ಮುಂದುವರಿಸಿತ್ತು.
ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರ­ನಾರಾಯಣನ್‌, ಕೇರಳ  ರಾಜ್ಯಪಾಲೆ  ಶೀಲಾ ದೀಕ್ಷಿತ್‌, ಪಶ್ಚಿಮ ಬಂಗಾಳ ರಾಜ್ಯಪಾಲ ಎಂ.ಕೆ. ನಾರಾಯಣನ್‌, ಮೋದಿ ಸಿ.ಎಂ ಆಗಿದ್ದಾಗ ಅಷ್ಟೇನೂ ಉತ್ತಮ ಸಂಬಂಧ ಹೊಂದಿ­ರದಿದ್ದ  ಗುಜರಾತ್‌ ರಾಜ್ಯಪಾಲೆ ಕಮಲಾ ಬೇನಿವಾಲ್‌ ಹಾಗೂ ನಾಗಾ­ಲ್ಯಾಂಡ್  ರಾಜ್ಯಪಾಲರಾದ ಅಶ್ವನಿ ಕುಮಾರ್‌ಗೆ ರಾಜೀನಾಮೆ ನೀಡುವಂತೆ ಸೂಚಿಸ­ಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ಅವರು ಈ ರಾಜ್ಯಪಾಲರಿಗೆ ದೂರವಾಣಿ ಮೂಲಕ ಕೇಂದ್ರ ಸರ್ಕಾರದ ಇಂಗಿತ ತಿಳಿಸಿದ್ದಾರೆ.
ಕಾಕತಾಳೀಯ ಎಂಬಂತೆ ಬಹುತೇಕ ರಾಜ್ಯಪಾಲರು ಮಂಗಳವಾರ ದೆಹಲಿಗೆ ಬಂದು, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿಯಾಗಿದ್ದು, ವದಂತಿ­ಗಳಿಗೆ ತುಪ್ಪ ಸುರಿದಂತಾಯಿತು.

‘ನಾನೇನಾದರೂ ರಾಜ್ಯಪಾಲನಾ­ಗಿದ್ದರೆ, ಆ ಹುದ್ದೆಯನ್ನು ತ್ಯಜಿಸುತ್ತಿದ್ದೆ’ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಈ ಹೇಳಿಕೆಯು ಕೆಲವು ರಾಜ್ಯಪಾಲರಿಗೆ ರಾಜೀನಾಮೆ ನೀಡುವಂತೆ ಕೇಂದ್ರ ಸರ್ಕಾರ  ಸೂಚಿಸಿರುವುದು ನಿಜ ಎಂಬುದನ್ನು ಖಾತರಿ ಪಡಿಸುವ ಧಾಟಿಯಲ್ಲೇ ಇದೆ ಎಂದು ವಿಶ್ಲೇಷಿಸಲಾಗಿದೆ.

ರಾಜ್ಯಪಾಲರಿಗೆ ರಾಜೀನಾಮೆ ನೀಡುವಂತೆ ಸೂಚಿಸಿರುವ ಕೇಂದ್ರ ಸರ್ಕಾರ, ಈ ಹಿಂದೆ ತಾನು ತಳೆದಿದ್ದ ನಿಲುವಿನಿಂದ ದೂರ ಸರಿದಿದೆ. ಅಧಿಕಾರಕ್ಕೆ ಬಂದ ಕೂಡಲೇ ಮೋದಿ ಮತ್ತು ಕೆಲವು ಹಿರಿಯ ಸಚಿವರು, ಕಾಂಗ್ರೆಸ್‌ ಅವಧಿಯಲ್ಲಿ ನೇಮಕಗೊಂಡ  ರಾಜ್ಯಪಾಲರಿಗೆ ಅವಧಿ ಪೂರೈಸಲು ಅವಕಾಶ ಮಾಡಿಕೊಡಲಾಗುವುದು.  ಅವರನ್ನು ಕಿತ್ತುಹಾಕುವ ಬದಲು ವರ್ಗಾಯಿಸಲಾಗುವುದು ಎಂದು ಹೇಳಿದ್ದರು.

ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ಇ. ಎಸ್‌. ಎಲ್‌. ನರಸಿಂಹನ್‌ ಅವರಿಗೆ ಆಂಧ್ರಪ್ರದೇಶದ ಜತೆ ತೆಲಂಗಾಣದ ಉಸ್ತುವಾರಿ ಹೊರುವಂತೆ ಹಾಗೂ ರಾಜ್ಯ ವಿಭಜನೆ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುವಂತೆ ಖುದ್ದು ಮೋದಿ ಅವರು ಸೂಚನೆ ನೀಡಿದ್ದರು.

ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಾಗದೇ ಇರುವ ಹಿರಿಯ ಬಿಜೆಪಿ ನಾಯಕರಿಗೆ ಸ್ಥಾನ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಯಶವಂತ್‌ ಸಿನ್ಹಾ, ವಿ.ಕೆ. ಮಲ್ಹೋತ್ರಾ, ಲಾಲ್‌ಜಿ ಟಂಡನ್‌, ಕಲ್ಯಾಣ್‌ ಸಿಂಗ್‌, ಕೇಸರಿನಾಥ್‌ ತ್ರಿಪಾಠಿ, ಓಂ ರಾಜಗೋಪಾಲ್‌ ಹೆಸರು ರಾಜ್ಯಪಾಲರ ಹುದ್ದೆಗೆ ಕೇಳಿಬರುತ್ತಿದೆ. ವಿ.ಕೆ. ಮಲ್ಹೋತ್ರಾ ಕರ್ನಾಟಕಕ್ಕೆ ನೇಮಕಗೊಳ್ಳುವ ಸಾಧ್ಯತೆಯಿದೆ.

ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುವ ಸೂಚನೆ ಇರುವುದು ಸಹ ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿತ್ತು.

ವದಂತಿಗೆ ಜೀವ: ಕಾಕತಾಳೀಯ ಎಂಬಂತೆ ಬಹುತೇಕ ರಾಜ್ಯಪಾಲರು ಮಂಗಳವಾರ ದೆಹಲಿಗೆ ಬಂದು, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿಯಾಗಿದ್ದು, ವದಂತಿಗಳಿಗೆ ಜೀವ ಬಂದಂತಾಯಿತು.

ಈ ಮಧ್ಯೆ, ರಾಜಸ್ತಾನದ ರಾಜ್ಯಪಾಲರಾದ ಮಾರ್ಗರೆಟ್‌ ಆಳ್ವ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆದರೆ, ಇದು ಸೌಜನ್ಯದ ಭೇಟಿ ಎಂದು ವಿಶ್ಲೇಷಿಸಲಾಗಿದೆ. ಆಳ್ವ ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನೂ ಭೇಟಿ ಮಾಡಲಿದ್ದಾರೆ. ಆಳ್ವ ಅವರ ಅಧಿಕಾರವಾಧಿ ಮುಂದಿನ ಆಗಸ್ಟ್‌ಗೆ ಮುಗಿಯಲಿದೆ.

ಬಿಜೆಪಿ ಸರ್ಕಾರದ ಜೊತೆಗೆ ಅಷ್ಟೇನೂ  ಉತ್ತಮ ಸಂಬಂಧ ಹೊಂದಿರದ ಕರ್ನಾಟಕ ಹಾಗೂ ಗುಜರಾತ್‌ ರಾಜ್ಯಪಾಲರಾದ ಎಚ್‌.ಆರ್‌. ಭಾರದ್ವಾಜ್‌ (ಕರ್ನಾಟಕ) ಅವರೂ ರಾಷ್ಟ್ರಪತಿ ಅವರನ್ನು ಭೇಟಿಯಾದರು.

ರಾಜೀನಾಮೆ ನೀಡುವಂತೆ ತಮಗೆ ಯಾವ ಸೂಚನೆಯೂ ಬಂದಿಲ್ಲ ಎಂದ ಭಾರದ್ವಾಜ್‌, ‘ನನ್ನ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಹಾಗಾಗಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ಹಾಗೆಯೇ ಪ್ರಧಾನಿ ಮೋದಿ ಅವರ ಭೇಟಿಗೂ ಸಮಯಾವಕಾಶ ಕೇಳಿದ್ದೇನೆ’ ಎಂದಿದ್ದಾರೆ.

ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್‌ನವರೇ ಆದ ಅಸ್ಸಾಂ ರಾಜ್ಯಪಾಲ ಜೆ.ಬಿ. ಪಟ್ನಾಯಕ್‌ ಸಹ ‘ನಾನು ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ಇದ್ದರೆ ಅದಕ್ಕೆ ನಾನೇನು ಮಾಡಲಾರೆ’ ಎಂದಿದ್ದಾರೆ.

ರಾಜಕೀಯ ದ್ವೇಷ– ಕಾಂಗ್ರೆಸ್‌: ರಾಜ್ಯಪಾಲರ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್‌, ಇದು ರಾಜಕೀಯ ಹಗೆತನ ಸಾಧಿಸುವ ನಡೆ, ದಬ್ಬಾಳಿಕೆಯ ಕ್ರಮ. ಇದರಿಂದ ಗಂಭೀರವಾದ ಪರಿಣಾಮಗಳು ಎದುರಾಗಲಿವೆ ಎಂದಿದೆ.

ಸುಪ್ರೀಂಕೋರ್ಟ್‌ ಸಹ ಅವಧಿಗೆ ಮುಂಚಿತವಾಗಿ ರಾಜ್ಯ­ಪಾಲ­ರನ್ನು ಅಧಿಕಾರ ತ್ಯಜಿಸುವಂತೆ ಸೂಚಿಸುವುದು ‘‘ನಿರಂ­ಕುಶ ಮತ್ತು ವಿಚಿತ್ರ ವರ್ತನೆಯ ಧೋರಣೆಯೇ ಆಗಿದೆ’’ ಎಂದು ಹೇಳಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ತಿಳಿಸಿದ್ದಾರೆ.

ಬೇಕಾಬಿಟ್ಟಿ ವಜಾ ತಪ್ಪು
ತೀರ ಅನಿವಾರ್ಯ ಕಾರಣ­ಗಳಿದ್ದರೆ ಮಾತ್ರ ರಾಜ್ಯಪಾಲ­ರನ್ನು ವಜಾ ಮಾಡ­ಬೇಕು. ಅದು ಬಿಟ್ಟು ಬೇಕಾಬಿಟ್ಟಿ ವಜಾ ಮಾಡುವಂತಿಲ್ಲ
–ಸರ್ಕಾರಿಯಾ ಆಯೋಗ, 1988

ಸರ್ಕಾರ ಬದಲಾದ ಸಂದರ್ಭದಲ್ಲಿ ರಾಜ್ಯಪಾಲರನ್ನು ಮನಸೋಇಚ್ಛೆ ಬದಲಾವಣೆ ಮಾಡಬಾರದು
 – ಸುಪ್ರೀಂಕೋರ್ಟ್‌, 2010

ಶೀಲಾ ಬಂಡಾಯ?
ರಾಜೀನಾಮೆ ನೀಡುವಂತೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿರುವುದೇ ಎಂಬ ಪ್ರಶ್ನೆಗೆ ಕೇರಳದ ರಾಜ್ಯಪಾಲರಾದ ಶೀಲಾ ದೀಕ್ಷಿತ್‌ ಪ್ರತಿಕ್ರಿಯಿಸಿಲ್ಲ. ‘ಅವಧಿ ಮುಗಿದ ಮೇಲೆಯೇ ರಾಜೀನಾಮೆ ನೀಡುತ್ತೇನೆ’ ಎಂದು ಅವರು ಹೇಳಿರು­ವುದಾಗಿ ಮೂಲಗಳು ತಿಳಿಸಿವೆ.

ನಿವೃತ್ತಿ ಯಾವಾಗ?
ಕಾಂಗ್ರೆಸ್‌ ನೇಮಕ ಮಾಡಿದ ರಾಜ್ಯಪಾಲರ ಪೈಕಿ ಕರ್ನಾಟಕದ ರಾಜ್ಯಪಾಲ ಎಚ್‌.ಆರ್‌್.ಭಾರದ್ವಾಜ್‌ ಅವರು ಇದೇ 29ಕ್ಕೆ ನಿವೃತ್ತಿಯಾಗಲಿದ್ದಾರೆ. ಹರಿಯಾಣ ರಾಜ್ಯಪಾಲ ಜಗನ್ನಾಥ ಪಹಾಡಿಯಾ ಜುಲೈ 26,  ರಾಜಸ್ತಾನದ ರಾಜ್ಯಪಾಲೆ ಮಾರ್ಗರೆಟ್‌ ಆಳ್ವ ಆಗಸ್ಟ್‌ 5, ಗುಜರಾತ್‌ ರಾಜ್ಯಪಾಲೆ ಕಮಲಾ ಬೇನಿವಾಲ್‌ ಅವರು ನವೆಂಬರ್‌ 27ರಂದು ನಿವೃತ್ತಿಯಾಗುವರು.

ADVERTISEMENT

ಆರರಿಂದ ಎಂಟು ತಿಂಗಳಿನಲ್ಲಿ ನಿವೃತ್ತಿಯಾಗುವ ರಾಜ್ಯಪಾಲರು: ಎಂ.ಕೆ.ನಾರಾಯಣನ್‌ (ಪಶ್ಚಿಮ­ಬಂಗಾಳ), ಜೆ.ಬಿ.ಪಟ್ನಾಯಕ್‌ (ಆಸ್ಸಾಂ), ಶಿವರಾಜ್‌ ಪಾಟೀಲ್‌ (ಪಂಜಾಬ್‌), ಊರ್ಮಿಳಾ ಸಿಂಗ್‌ (ಹಿಮಾಲಚಪ್ರದೇಶ).

‘ಇತರ ರಾಜಕೀಯ ಪಕ್ಷಗಳು ನೇಮಕ ಮಾಡಿದ ರಾಜ್ಯಪಾಲರನ್ನು ಬದಲಾವಣೆ ಮಾಡುವುದರಲ್ಲಿ ಏನು ಅರ್ಥವಿದೆ. ರಾಜಕೀಯ ಹಿನ್ನೆಲೆ ಇರುವ ವ್ಯಕ್ತಿಗಳು ರಾಜ್ಯಪಾಲರಾಗಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ’
– ಅರುಣ್‌ ಜೇಟ್ಲಿ (2004, ಜುಲೈ 2)

‘ಸಾಮಾನ್ಯವಾಗಿ ರಾಜ್ಯಪಾಲರು ನಿರ್ದಿಷ್ಟ ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಪಕ್ಷದಿಂದ ರಾಜ್ಯಪಾಲರು ಸೂಚನೆ ಸ್ವೀಕರಿಸುವುದು ಸರಿಯಲ್ಲ’
  –ಆನಂದ್‌ ಶರ್ಮಾ (2004, ಜುಲೈ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.