ADVERTISEMENT

ರಾಜ್ಯಪಾಲರ ವಜಾ: ಜನತಾ ಪಕ್ಷದ ಬಳುವಳಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2014, 19:30 IST
Last Updated 17 ಜೂನ್ 2014, 19:30 IST

ನವದೆಹಲಿ: ಆಡಳಿತ ಬದಲಾವಣೆ ಸಂದರ್ಭದಲ್ಲಿ ರಾಜಭವನ ಹಾಗೂ ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಹೊಸ ವಿಷಯವೇನಲ್ಲ.
1977ರಲ್ಲಿ ದೇಶವು ಮೊದಲ ಬಾರಿ ಇಂಥದ್ದೊಂದು ಸಂಘರ್ಷಕ್ಕೆ ಸಾಕ್ಷಿ ಆಯಿತು. ಸ್ವತಂತ್ರ ಭಾರತದಲ್ಲಿ ಮೊತ್ತ ಮೊದಲ ಬಾರಿ ಕಾಂಗ್ರೆಸ್‌ ಪಕ್ಷ ಸೋಲು ಕಂಡ ವರ್ಷವದು. 

ಜನತಾಪಕ್ಷ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಹಿಂದಿನ ಸರ್ಕಾರ ನೇಮಕ ಮಾಡಿದ್ದ ರಾಜ್ಯಪಾಲರನ್ನು ವಜಾ ಮಾಡುವ ಸಂಪ್ರದಾಯ ಶುರುವಾಗಿದ್ದೇ ಜನತಾಪಕ್ಷದ ಆಡಳಿತದಲ್ಲಿ. ಆದರೆ ಆಗಿನ ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರು ಮೊರಾರ್ಜಿ ದೇಸಾಯಿ ಸರ್ಕಾರ ಮುಂದಿಟ್ಟಿದ್ದ ಪ್ರಸ್ತಾವಕ್ಕೆ ಸಹಿ ಹಾಕದೇ ವಾಪಸ್‌ ಕಳಿಸಿದ್ದರು. ಸಂಪುಟವು ಮತ್ತೊಮ್ಮೆ ಪ್ರಸ್ತಾವ ಕಳಿಸಿತ್ತು. ರಾಷ್ಟ್ರಪತಿ ಮುಂದೆ ಬೇರೆ ದಾರಿ ಇರಲಿಲ್ಲ. ಸಂವಿಧಾನದ ನಿಯಮದ ಪ್ರಕಾರ ಸಹಿ ಮಾಡಲೇ ಬೇಕಿತ್ತು.

ಜನತಾಪಕ್ಷ ಶುರು ಮಾಡಿದ ಈ ಸಂಪ್ರ­ದಾಯವನ್ನು ನಂತರ ಬಂದ ಎಲ್ಲ ಸರ್ಕಾರ­ಗಳು ರೂಢಿಸಿಕೊಂಡು ಬಂದವು.   ಅದು 1980. ಆಗಿನ ತಮಿಳು­ನಾಡು ರಾಜ್ಯಪಾಲ ಪ್ರಭು­ದಾಸ್‌ ಪಟ್ವಾರಿ ಅವರನ್ನು ಇಂದಿರಾ ಗಾಂಧಿ ಸರ್ಕಾರ ವಜಾ ಮಾಡಿತ್ತು. ಇದಾದ ವರ್ಷದ ಬಳಿಕ ರಾಜಸ್ತಾನದ ರಾಜ್ಯಪಾಲ ರಘುಲಾಲ್‌ ತಿಲಕ್‌ ಅವರನ್ನೂ ವಜಾ ಮಾಡಲಾಯಿತು. ಆದರೆ ಇವರಿಬ್ಬರನ್ನು ಯಾವ ಕಾರಣಕ್ಕೆ ವಜಾ ಮಾಡಲಾಯಿತು ಎನ್ನುವುದು ಮಾತ್ರ ಸ್ಪಷ್ಟವಾಗಿರಲಿಲ್ಲ.
1980ರಲ್ಲಿ ಮತ್ತೆ ಅಧಿಕಾರ ಗದ್ದುಗೆ ಏರಿದ್ದ ಕಾಂಗ್ರೆಸ್‌ 1989ರಲ್ಲಿ ಸೋಲು ಕಂಡಿತು. ಅಧಿಕಾರಕ್ಕೆ ಬಂದ ವಿ.ಪಿ.­ಸಿಂಗ್‌ ನೇತೃತ್ವದ ಸರ್ಕಾರ ಆಗಿನ ಎಲ್ಲ ರಾಜ್ಯ­ಪಾಲರಿಂದ ರಾಜೀನಾಮೆ ಕೇಳಿತು.

1998ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆಗಿನ ಗೃಹ ಕಾರ್ಯದರ್ಶಿ ಬಿ.ಪಿ.ಸಿಂಗ್‌ ಅವರು ಗುಜರಾತ್‌, ಗೋವಾ ಹಾಗೂ ಮಿಜೋರಾಂ ರಾಜ್ಯಪಾಲರಿಂದ ರಾಜೀನಾಮೆ ಕೇಳಿದ್ದರು.

2004ರಲ್ಲೂ ಈ ಸಂಪ್ರದಾಯ ಮುಂದುವರಿಯಿತು. ಆಗಿನ ಯುಪಿಎ ಸರ್ಕಾರ ಗೋವಾ, ಹರಿಯಾಣ, ಗುಜರಾತ್‌ ಹಾಗೂ ಉತ್ತರಪ್ರದೇಶದ ರಾಜ್ಯಪಾಲರನ್ನು ಕಾರಣ ಕೊಡದೇ ವಜಾ ಮಾಡಿತ್ತು. ಇವರನ್ನೆಲ್ಲ ಹಿಂದಿನ ಎನ್‌ಡಿಎ ಸರ್ಕಾರ ನೇಮಕ ಮಾಡಿತ್ತು.

ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಆಗಿನ ರಾಜ್ಯಸಭಾ ಸದಸ್ಯ ಬಿ.ಪಿ.­ಸಿಂಘಾಲ್‌್ ಅವರು ಸುಪ್ರೀಂಕೋರ್ಟ್‌್ ಮೊರೆ ಹೋದರು.  ಆರು ವರ್ಷಗಳ ಕಾನೂನು ಸಮರಕ್ಕೆ 2010ರಲ್ಲಿ ತೆರೆ ಬಿತ್ತು. ‘ಸರ್ಕಾರ ಬದಲಾದ ಸಂದರ್ಭ­ದಲ್ಲಿ ರಾಜ್ಯಪಾಲರನ್ನು ಬೇಕಾ­ಬಿಟ್ಟಿ­ಯಾಗಿ ಬದಲಾವಣೆ ಮಾಡಬಾರದು’ ಎಂದು ಕೋರ್ಟ್‌ ತೀರ್ಪು ನೀಡಿತು.

‘ಇವರನ್ನೆಲ್ಲ ರಾಜಕೀಯ ಉದ್ದೇಶ­ದಿಂದ ನೇಮಕ ಮಾಡಿ­ಕೊಳ್ಳಲಾಗಿದೆ. ದೀರ್ಘ­ಕಾಲದಿಂದಲೂ ಇವರು ಸಂಘ­ಪರಿವಾರದೊಂದಿಗೆ ಸಂಪರ್ಕ ಇಟ್ಟು­ಕೊಂಡಿ­ದ್ದಾರೆ’ ಎಂದು ವಾದಿಸುವ ಮೂಲಕ ಕಾಂಗ್ರೆಸ್‌್ ಪಕ್ಷವು ತನ್ನ ನಡೆ­ಯನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.