ADVERTISEMENT

'ರಾಹುಲ್ ಗುಲಾಬಿ', 'ರಾಹುಲ್ ಹರ್ಬಲ್ ಟೀ' ನಂತರ ಇದೀಗ 'ರಾಹುಲ್ ಹಾಲು': ರಾಹುಲ್ ಅಭಿಮಾನಿಯಿಂದ ವಿನೂತನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 10:53 IST
Last Updated 17 ಡಿಸೆಂಬರ್ 2017, 10:53 IST
ಕೃಪೆ: ಹಿಂದೂಸ್ತಾನ್ ಟೈಮ್ಸ್
ಕೃಪೆ: ಹಿಂದೂಸ್ತಾನ್ ಟೈಮ್ಸ್   

ಗೋರಖಪುರ್: 2014 ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಚಾಯ್ ಪೇ ಚರ್ಚಾ ಕಾರ್ಯಕ್ರಮದ ಮೂಲಕ ಚುನಾವಣಾ ಪ್ರಚಾರ ಮಾಡಿದ್ದರು. ಇದೀಗ ರಾಹುಲ್  ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಖುಷಿಯಲ್ಲಿ ಗೋರಖ್‍ಪುರ್‍‍ದ ಅನ್ವರ್ ಹುಸೇನ್ ಎಂಬ ಕಾಂಗ್ರೆಸ್ ಯುವ ನಾಯಕರೊಬ್ಬರು ಜನರಿಗೆ 'ರಾಹುಲ್ ಹಾಲು' ವಿತರಿಸಿ ಸಂಭ್ರಮಿಸಿದ್ದಾರೆ.
ಇಷ್ಟು ವರುಷ ರಾಹುಲ್ ಅವರನ್ನು ಬ್ರಾಂಡ್ ಎಂದು ಗುರುತಿಸಲ್ಪಡಲು ನಾವು ಕೆಲಸ ಮಾಡಿದ್ದೆವು. ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ. ನಿಮ್ಮಂತ ಯುವ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಕು ಎಂದು ರಾಹುಲ್ ನನ್ನಲ್ಲಿ ಹೇಳಿದ್ದರು.

ರಾಹುಲ್ ಗಾಂಧಿ ಈಗ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ ಮತ್ತಷ್ಟು ಬಲಗೊಳ್ಳಲಿದೆ. ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಯುವಜನರ ನಡುವೆ ರಾಹುಲ್ ಜನಪ್ರಿಯರಾಗಿದ್ದಾರೆ ಅಂತಾರೆ ಅನ್ವರ್ ಹುಸೇನ್.

2005ರಲ್ಲಿ ರಾಹುಲ್ ಗಾಂಧಿ ಗೋರಖ್‌‍ಪುರ್‍‍‌ಗೆ ಬಂದಿದ್ದಾಗ ಅವರಿಂದ ಪ್ರಭಾವಿತರಾಗಿ ಅನ್ವರ್ ಕಾಂಗ್ರೆಸ್  ಪಕ್ಷಕ್ಕೆ ಸೇರಿದ್ದರು.ಇದೀಗ ಬ್ರಾಂಡ್ ರಾಹುಲ್ ಪ್ರಚಾರಕ್ಕಾಗಿ ಅನ್ವರ್ ಕಾರ್ಯ ಪ್ರವೃತ್ತರಾಗಿದ್ದಾರೆ.

ADVERTISEMENT

ರಾಹುಲ್ ಹಾಲು ಅಭಿಯಾನ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. 2015ರಲ್ಲಿ ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನೆತ್ತರಲ್ಲಿ ಪತ್ರ ಬರೆದು ಕಳಿಸಿದ ಅಭಿಯಾನಕ್ಕೆ ಅನ್ವರ್ ಅವರೇ ನೇತೃತ್ವ  ವಹಿಸಿದ್ದರು.

ಉತ್ತರ ಪ್ರದೇಶ ಚುನಾವಣೆ ವೇಳೆ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಅವರನ್ನು ಕರಣ್  ಅರ್ಜುನ್ ಕಾ ಜೋಡಿ ಎಂದು ಹೊಗಳಿದ್ದ ಅನ್ವರ್, ಕಾಂಗ್ರೆಸ್ ಪರ ಮತಯಾಚನೆ ವೇಳೆ ರಾಹುಲ್ ಗುಲಾಬಿ  ವಿತರಿಸಿದ್ದರು.

ಡಿಡಿಯು ಗೋರಖ್‍ಪುರ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವ ಅನ್ವರ್ 2016ರಲ್ಲಿ  ನೋಟು ರದ್ದತಿ ವೇಳೆ ಜನರು ಬ್ಯಾಂಕ್ ಮುಂದೆ ಸಾಲು ನಿಂತು ಸುಸ್ತಾಗಿ ಬಿದ್ದ ಜನರಿಗೆ ರಾಹುಲ್ ಹರ್ಬಲ್ ಟೀ ನೀಡಿ ಸುದ್ದಿಯಾಗಿದ್ದರು. ಕೆಲವು ತಿಂಗಳ ಹಿಂದೆ  ಈರುಳ್ಳಿ ಬೆಲೆ ಏರಿಕೆಯಾಗಿದ್ದಾಗ ಇವರು 1 ಕೆಜಿ ಈರುಳ್ಳಿಯನ್ನು 5 ರೂಪಾಯಿಗೆ ಮಾರಿ ರಾಹುಲ್ ಈರುಳ್ಳಿ ಸುದ್ದಿಯಾಗುವಂತೆ ಮಾಡಿದ್ದರು.

ಈ ವಿನೂತನ ಪ್ರಚಾರದಿಂದಾಗಿ ಅನ್ವರ್ ಅವರು ಇತ್ತೀಚೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದ್ದಾರೆ.

ಅನ್ವರ್ ಅವರು ತಮ್ಮ ಅಪಾರ್ಟ್ ಮೆಂಟ್‍ನಲ್ಲಿ ರಾಹುಲ್ ಗಾಂಧಿಯವರ ಪಿಕ್ಟರ್  ಗ್ಯಾಲರಿಯನ್ನೂ ಮಾಡಿದ್ದಾರೆ. ಅವರ ಕಾಫಿ ಮಗ್‍ನಲ್ಲಿಯೂ ರಾಹುಲ್ ಅವರದ್ದೇ ಚಿತ್ರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.