ADVERTISEMENT

ರೇಬಿಸ್‌ನಿಂದ ಬಾಲಕ ಗುಣಮುಖ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2014, 19:30 IST
Last Updated 13 ಸೆಪ್ಟೆಂಬರ್ 2014, 19:30 IST

ಚಂಡೀಗಡ: ಚಂಡೀಗಡ ಸೇನಾ  ಆಸ್ಪತ್ರೆಯ ವೈದ್ಯರು ರೇಬಿಸ್‌ನಿಂದ ಬಳಲುತ್ತಿದ್ದ 16 ವರ್ಷದ ಹೀರಾಸಿಂಗ್‌ ಎಂಬಾತನನ್ನು ಗುಣಪಡಿಸಿ ವೈದ್ಯಕೀಯ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಈತ ರೇಬಿಸ್‌ ಬಂದ ಬಳಿಕವೂ ಗುಣಮುಖನಾದ ವಿಶ್ವದ 14ನೇ ವ್ಯಕ್ತಿ ಎಂದು ಹೇಳಲಾಗಿದೆ.

ಬೆಂಗಳೂರಿನ ನಿಮ್ಹಾನ್ಸ್‌ನ ತಜ್ಞ ನರರೋಗ  ವೈದ್ಯರು ಈ ವೈದ್ಯಕೀಯ ತಂಡಕ್ಕೆ ನೆರವಾಗಿದ್ದರು. ರೇಬಿಸ್‌ ರೋಗಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ  ನಿಮ್ಹಾನ್ಸ್‌ನ ಪ್ರೊ. ಮಧುಸೂದನ ಸಹ ಈ ತಂಡದಲ್ಲಿ ಇದ್ದರು. 

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹೀರಾ ಸಿಂಗ್‌ನನ್ನು ಈ ವರ್ಷದ ಮೇ ತಿಂಗಳಿ­ನಲ್ಲಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ಬೀದಿ­ನಾಯಿ ಕಚ್ಚಿತ್ತು. ರೇಬಿಸ್‌ ನಿರೋಧಕ ನಾಲ್ಕು ಚುಚ್ಚುಮದ್ದುಗಳನ್ನು ನೀಡ­ಲಾಗಿತ್ತು. ಆದರೂ ಆತ ಕೋಮಾ ಸ್ಥಿತಿಗೆ ಜಾರಿದ್ದ.  ಸೇನಾ ಆಸ್ಪತ್ರೆಗೆ ಕರೆತರುವ ವೇಳೆ, ಜೀವರಕ್ಷಕ ಸಾಧನ ಅಳವಡಿಸಲಾಗಿತ್ತು. ಅಂತಿಮವಾಗಿ ಆತನಲ್ಲಿ ರೇಬಿಸ್‌ ಉಲ್ಬಣಿಸಿದ್ದು ಪತ್ತೆಯಾಯಿತು. 

ಜೀವನ್ಮರಣದ ನಡುವೆ ಹೋರಾಡು­ತ್ತಿದ್ದ ಆತನಿಗೆ ಉಸಿರಾಟಕ್ಕಾಗಿ ಕುತ್ತಿಗೆ­ಯಲ್ಲಿ ಹಾಗೂ ಜೀರ್ಣಕ್ರಿಯೆಗಾಗಿ ಹೊಟ್ಟೆ­ಯಲ್ಲಿ ನಳಿಕೆಗಳನ್ನು ಅಳವಡಿ­ಸಲಾಗಿತ್ತು.  ಈ ಸ್ಥಿತಿಯಿಂದ ಈಗ ಆತ ಪೂರ್ಣ ಚೇತರಿಸಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.