ADVERTISEMENT

ರೈಲ್ವೆ ಸುರಕ್ಷತೆ ಆದ್ಯತೆ: ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 27 ಮೇ 2014, 19:30 IST
Last Updated 27 ಮೇ 2014, 19:30 IST

ನವದೆಹಲಿ: ರೈಲ್ವೆ ಸುರಕ್ಷತೆಗೆ ತಮ್ಮ ಆದ್ಯತೆ ಎಂದು ನೂತನ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರು  ಹೇಳಿದ್ದಾರೆ.
ಇಪ್ಪತ್ತಾರು ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ‘ಗೊರಖ್‌ ಧಾಮ್’ ರೈಲು ದುರಂತದ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತೆ ಮತ್ತು ವೇಗ ನಿರ್ವಹಣೆಗೆ ಆದ್ಯತೆ ನೀಡುವುದಾಗಿ  ಹೊಸ ರೈಲು ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಮಂಗಳವಾರ ಸಂಜೆ ರೈಲ್ವೆ ಭವನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ಮಾತನಾಡಿದರು.

ರೈಲ್ವೆ ಸಚಿವಾಲಯದ ರಾಜ್ಯ ಸಚಿವ ಮನೋಜ್‌ ಸಿನ್ಹಾ ಹಾಗೂ ಕೇಂದ್ರ  ಸಣ್ಣ ಕೈಗಾರಿಕಾ ಸಚಿವ ಕಲ್‌ರಾಜ್‌ ಮಿಶ್ರಾ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ದುರ್ಘಟನೆ ದುರದೃಷ್ಟಕರ. ಇನ್ನು ಮುಂದೆ ರೈಲು ಪ್ರಯಾಣಿಕರ ಭದ್ರತೆ, ಸುರಕ್ಷತೆ ಮತ್ತು ವೇಗ ನಿರ್ವಹಣೆಗೆ ಹೆಚ್ಚು ಗಮನ ಕೊಡಲಾಗುವುದು ಎಂದರು.

ರೈಲ್ವೆ ಅಭಿವೃದ್ಧಿ ಕುರಿತು ಬೇಕಾದಷ್ಟು ಯೋಜನೆ­ಗಳು ತಲೆಯೊಳಗಿವೆ. ಅದರ ಸಾಧಕ– ಬಾಧಕ ಹಾಗೂ ಅನುಷ್ಠಾನ ಸಾಧ್ಯತೆ ಕುರಿತು ಚಿಂತನೆ ಮಾಡಲಾಗುವುದು ಎಂದು ಸದಾನಂದಗೌಡ ತಿಳಿಸಿದರು. ಆದರೆ, ಯಾವುದೇ ಯೋಜನೆಯನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ರೈಲ್ವೆಗೆ ಸಂಬಂಧಿಸಿದ ಯೋಜನೆಗಳನ್ನು ಅಂತಿಮಗೊಳಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಮಾಲೋಚಿಸಲಾಗುವುದು. ಅವರ ಬಳಿಯೂ ಅನೇಕ ಚಿಂತನೆಗಳಿವೆ. ನಮ್ಮ ಯೋಜನೆಗಳಿಗೆ ಅಂತಿಮ ರೂಪ ನೀಡಿದ ಬಳಿಕ ಮಾಧ್ಯಮಗಳಿಗೆ ಬಹಿರಂಗಪಡಿಸಲಾಗುವುದು ಎಂದು ವಿವರಿಸಿದರು.

ಅತೀ ವೇಗದ ರೈಲು, ಬುಲೆಟ್‌ ರೈಲು ಮತ್ತು ರೈಲ್ವೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುರಿತ ಯಾವುದೇ ಪ್ರಶ್ನೆಗೂ ರೈಲ್ವೆ ಸಚಿವರು ಉತ್ತರಿಸಲಿಲ್ಲ. ನಾನು ಇಂದು ಅಧಿಕಾರ ವಹಿಸಿಕೊಂಡಿದ್ದೇನೆ. ರೈಲ್ವೆ ಸಚಿವಾಲಯದ ಮುಂದೆ ಯಾವ ಯೋಜನೆಗಳಿವೆ ಎಂಬುದನ್ನು ಸಮಗ್ರವಾಗಿ ಅಧ್ಯಯನ ಮಾಡುತ್ತೇನೆ. ಸಚಿವಾಲಯವನ್ನು ಅರ್ಥ ಮಾಡಿಕೊಳ್ಳಲು ಕನಿಷ್ಠ ಎರಡು ವಾರವಾದರೂ ಬೇಕಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಚೊಚ್ಚಲ ಸಂಪುಟ ಸಭೆಯಲ್ಲಿ ರೈಲ್ವೆ ಸಚಿವರು ಭಾಗವಹಿಸಿದ್ದರು. ಈ ಸಭೆಯಲ್ಲಿ ರೈಲ್ವೆ ಸುರಕ್ಷತೆ ಕುರಿತು ಚರ್ಚಿಸಲಾಯಿತು ಎಂದು ಅವರು ತಿಳಿಸಿದರು. ನೂತನ ರೈಲ್ವೆ ಸಚಿವರು ರೈಲ್ವೆ ಮಂಡಳಿ ಅಧಿಕಾರಿಗಳ ಜತೆ ಸಮಾಲೋಚಿಸಿದರು.

ರೈಲ್ವೆ ಸಚಿವರ ತಮ್ಮ ಸ್ಟೇಷನ್‌ ಮಾಸ್ಟರ್‌
ಉಡುಪಿ (ಪಿಟಿಐ):
ನೂತನ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಅವರ ಕಿರಿಯ ಸಹೋದರ ಡಿ.ವಿ. ಸುರೇಶ್‌ ಗೌಡ ಅವರು ಮಂಗಳೂರು ಬಳಿಯ ನಂದಿಕೂರು ನಿಲ್ದಾಣದಲ್ಲಿ ಸ್ಟೇಷನ್‌ ಮಾಸ್ಟರ್‌ ಆಗಿದ್ದಾರೆ.

ಅವರು ತಮ್ಮ ಸಹೋದರ ಸಚಿವರಾಗಿ ಕರ್ನಾ­ಟಕ ರಾಜ್ಯ­ದಲ್ಲಿ, ಅದರಲ್ಲೂ ಮುಖ್ಯ­ವಾಗಿ ದಕ್ಷಿಣ ಕನ್ನಡ ಪ್ರಾಂತ್ಯ­ದಲ್ಲಿ ರೈಲ್ವೆ ವ್ಯವ­ಸ್ಥೆ­ಯನ್ನು ಸುಧಾರಣೆ ಮಾಡ­ಬೇಕೆಂದು ಬಯಸಿದ್ದಾರೆ. ಆದರೆ ತಾನು ವೈಯಕ್ತಿಕವಾಗಿ ಸೋದರನಿಂದ  ಏನನ್ನೂ ನಿರೀಕ್ಷಿಸಿಲ್ಲ ಎಂದು ತಿಳಿಸಿದ್ದಾರೆ.

1985ರಲ್ಲಿ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಉತ್ತೀರ್ಣ­ರಾದ ಅವರು, ಮೊದಲಿಗೆ ಹುಬ್ಬಳ್ಳಿ­ಯಲ್ಲಿ ಸಹಾಯಕ ಸ್ಟೇಷನ್‌ ಮಾಸ್ಟರ್‌ ಆಗಿ ಸೇವೆಗೆ ಸೇರಿದರು. 2008ರಲ್ಲಿ ಕೊಂಕಣ ರೈಲ್ವೆಗೆ ನಿಯೋಜನೆಗೊಂಡ ಅವರು, ನಂದಿಕೂರು ನಿಲ್ದಾ­ಣದ ಸ್ಟೇಷನ್‌ ಮಾಸ್ಟರ್‌ ಆಗಿ ಅಧಿಕಾರ ವಹಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.