ADVERTISEMENT

ಲಷ್ಕರ್ ಎ ತಯಬಾ ಸೇರಿದ್ದವ ಶರಣು

ಪಿಟಿಐ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ಲಷ್ಕರ್ ಎ ತಯಬಾ ಸೇರಿದ್ದವ ಶರಣು
ಲಷ್ಕರ್ ಎ ತಯಬಾ ಸೇರಿದ್ದವ ಶರಣು   

ಶ್ರೀನಗರ/ಜಮ್ಮು: ಕಳೆದ ವಾರ ಲಷ್ಕರ್ ಎ ತಯಬಾ ಉಗ್ರ ಸಂಘಟನೆ ಸೇರಿದ್ದ ಕಾಲೇಜು ವಿದ್ಯಾರ್ಥಿ, ಫುಟ್‌ಬಾಲ್ ಆಟಗಾರ ಮಜಿದ್ ಅರ್ಶಿದ್ ಖಾನ್ ಗುರುವಾರ ರಾತ್ರಿ ರಕ್ಷಣಾ ಪಡೆ ಎದುರು ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳ ಸಮೇತ ದಕ್ಷಿಣ ಕಾಶ್ಮೀರದಲ್ಲಿರುವ ರಕ್ಷಣಾ ಶಿಬಿರದೊಳಕ್ಕೆ ಗುರುವಾರ ರಾತ್ರಿ ಬಂದ ಅರ್ಶಿದ್ ಶರಣಾಗಿದ್ದಾನೆ. ಶುಕ್ರವಾರ ಬೆಳಿಗ್ಗೆ ಆತನನ್ನು ಗೋಪ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತನ್ನ ಆಪ್ತ ಸ್ನೇಹಿತ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ನಂತರ ಅರ್ಶಿದ್ ಉಗ್ರರ ಗುಂಪನ್ನು ಸೇರಿದ್ದ ಎಂದು ಹೇಳಲಾಗಿದೆ. ಆತ ಶರಣಾಗುವಂತೆ ಮನವೊಲಿಸುವ ಸಲುವಾಗಿ ಆತನ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜೊತೆ ಪೊಲೀಸರು ನಿರಂತರ ಸಂಪರ್ಕದಲ್ಲಿ ಇದ್ದರು.

ADVERTISEMENT

ಶರಣಾಗುವಂತೆ ಅರ್ಶಿದ್‌ ಪೋಷಕರು  ಟಿ.ವಿ ವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆತನ ತಾಯಿ ಅಸಿಯಾ ಖಾನ್ ಅವರು ಮನೆಗೆ ವಾಪಸ್ ಬರುವಂತೆ ಕಣ್ಣೀರಿಟ್ಟು ಕೇಳಿಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿತ್ತು.

ತಾಯಿ ಪ್ರೀತಿ ಗೆದ್ದಿದೆ: ‘ತಾಯಿಯ ಪ್ರೀತಿ ಗೆದ್ದಿದೆ. ಅರ್ಶಿದ್‌ನನ್ನು ವಾಪಸ್ ಕರೆತರುವಲ್ಲಿ ತಾಯಿಯ ಭಾವಪೂರ್ವಕ ಮನವಿ ಸಹಕಾರಿಯಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಟ್ವೀಟ್ ಮಾಡಿದ್ದಾರೆ.

**

‘ಹಿಂಸಾ ಮಾರ್ಗ ತ್ಯಜಿಸಲು ಮನವಿ ಮಾಡಿ’

‘ಹಿಂಸೆಯ ಮಾರ್ಗವನ್ನು ತ್ಯಜಿಸಿ ಮನೆಗೆ ಮರಳುವಂತೆ ಮಕ್ಕಳ ಮನವೊಲಿಸಿ’ ಎಂದು ಉಗ್ರವಾದದ ಮೊರೆಹೋದವರ ತಾಯಂದಿರಿಗೆ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೈದ್ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.