ADVERTISEMENT

ಲಾಲು ಕನಸಿಗೆ ಆರಂಭದಲ್ಲೇ ವಿಘ್ನ

ಮಹತ್ವಾಕಾಂಕ್ಷೆಯ ರ‍್ಯಾಲಿಗೆ ರಾಹುಲ್‌, ಮಾಯಾ, ಯೆಚೂರಿ ಗೈರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:30 IST
Last Updated 23 ಆಗಸ್ಟ್ 2017, 19:30 IST
ಲಾಲು ಕನಸಿಗೆ ಆರಂಭದಲ್ಲೇ ವಿಘ್ನ
ಲಾಲು ಕನಸಿಗೆ ಆರಂಭದಲ್ಲೇ ವಿಘ್ನ   

ಪಟ್ನಾ: ಬಿಜೆಪಿ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಯತ್ನಕ್ಕೆ ಆರಂಭದಲ್ಲೇ ವಿಘ್ನಗಳು ಎದುರಾದಂತೆ ಕಾಣಿಸುತ್ತಿದೆ.

ಆಗಸ್ಟ್‌ 27ರಂದು ಪಟ್ನಾದಲ್ಲಿ ಲಾಲು ಆಯೋಜಿಸಿರುವ ‘ಬಿಜೆಪಿಯನ್ನು ಓಡಿಸಿ, ದೇಶವನ್ನು ಉಳಿಸಿ’ ರ‍್ಯಾಲಿಯಿಂದ ದೂರ ಉಳಿಯಲು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಸಿಪಿಎಂನ ಸೀತಾರಾಂ ಯೆಚೂರಿ ನಿರ್ಧರಿಸಿದ್ದಾರೆ.

ಇನ್ನಿಬ್ಬರು ಮುಖಂಡರಾದ ಡಿಎಂಕೆಯ ಎಂ.ಕೆ. ಸ್ಟಾಲಿನ್‌ ಮತ್ತು ಎನ್‌ಸಿಪಿಯ ಶರದ್‌ ಪವಾರ್‌ ಅವರು ಕೂಡ ಭಾಗವಹಿಸುವಿಕೆಯನ್ನು ದೃಢಪಡಿಸಿಲ್ಲ.

ADVERTISEMENT

ಭಾನುವಾರ ನಡೆಯಲಿರುವ ಈ ಬೃಹತ್‌ ಸಮಾವೇಶ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂದು ಲಾಲು ಹೇಳುತ್ತಿದ್ದಾರೆ. ಆದರೆ, ಇತರ ಪ‍ಕ್ಷಗಳ ಪ್ರಮುಖ ನಾಯಕರು ರ‍್ಯಾಲಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿರುವುದರಿಂದ ಈಗಾಗಲೇ ಭ್ರಷ್ಟಾಚಾರ ಆರೋಪಗಳು ಮತ್ತು ಕೋರ್ಟ್‌ ಪ್ರಕರಣಗಳನ್ನು ಎದುರಿಸುತ್ತಿರುವ ಲಾಲುಗೆ ಮತ್ತಷ್ಟು ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

‘ಕಾಂಗ್ರೆಸ್‌ ಪರವಾಗಿ ಗುಲಾಂ ನಬಿ ಆಜಾದ್‌ ಮತ್ತು ಸಿ.ಪಿ ಜೋಶಿ ಅವರು ಭಾಗವಹಿಸಲಿದ್ದಾರೆ.  ಮಾಯಾವತಿ ಪರವಾಗಿ ಸತೀಶ್‌ ಚಂದ್ರ ಪಾಲ್ಗೊಳ್ಳಲಿದ್ದಾರೆ’ ಎಂದು ಲಾಲು ಬುಧವಾರ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಎಲ್ಲ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನವಾಗಿ ಕಾಂಗ್ರೆಸ್‌ನ ಸೋನಿಯಾಗಾಂಧಿ, ಟಿಎಂಸಿಯ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ ಅವರ ಜೊತೆಗೆ ಎಡಪಕ್ಷಗಳು, ಡಿಎಂಕೆ ಮತ್ತು ಎನ್‌ಸಿಪಿ ಮುಖ್ಯಸ್ಥರಿಗೆ ಆಹ್ವಾನ ನೀಡಿದ್ದರು.

ಭ್ರಷ್ಟಾಚಾರದ ವಿರುದ್ಧ ಸ್ಪಷ್ಟ ನಿಲುವು ತಾಳಿರುವ ರಾಹುಲ್‌ ಗಾಂಧಿ ಅವರು 2013ರಲ್ಲಿ ಸುಗ್ರೀವಾಜ್ಞೆ ಹೊರಡಿಸುವುದಕ್ಕೂ ಕಾರಣವಾಗಿದ್ದರು.

**

ಬಿಜೆಪಿ ವ್ಯಂಗ್ಯ

‘ಇದು ವಿರೋಧ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸುವ ರ‍್ಯಾಲಿ ಅಲ್ಲ. ಭ್ರಷ್ಟಾಚಾರ ಆರೋಪ ಹೊತ್ತಿರುವವರ ಔತಣ ಕೂಟವಾಗಲಿದೆ. ಲಾಲು ಅವರು ‘ದೇಶವನ್ನು ಉಳಿಸಿ’ ರ‍್ಯಾಲಿಯ ಹೆಸರನ್ನು ‘ನನ್ನ ಆಸ್ತಿ ಉಳಿಸಿ’ ಎಂದು ಬದಲಾಯಿಸಬೇಕು’ ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಗೇಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.