ADVERTISEMENT

ಲೋಕಪಾಲ ನೇಮಕ ಪ್ರಕ್ರಿಯೆ ಸದ್ಯಕ್ಕಿಲ್ಲ

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ನವದೆಹಲಿ(ಪಿಟಿಐ): ಲೋಕಪಾಲಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಸಂಬಂಧಿಸಿ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗೆಗಿನ ನಿರ್ಧಾರವನ್ನು ಚುನಾವಣೆ ನಂತರ ರಚನೆಯಾಗುವ ಹೊಸ ಸರ್ಕಾರವೇ ಕೈಗೊಳ್ಳಲಿದೆ ಎಂಬ ಸುಳಿವನ್ನು ಈ ಮೂಲಕ ಸರ್ಕಾರ ನೀಡಿದೆ.

ಎಂ.ಆರ್. ಲೋಧಾ ಅವರ ನೇತೃತ್ವದ ಪೀಠದ ಮುಂದೆ ಹಾಜರಾದ ಸಾಲಿಸಿಟರ್‌ ಜನರಲ್‌ ಮೋಹನ್‌ ಪರಾಶರನ್‌ ಈ ವಿಷಯ ತಿಳಿಸಿದರು. ಹಾಗಾಗಿ ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಲಾಗಿದೆ.

ಲೋಕಪಾಲಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದ್ದರೂ ಕೇಂದ್ರ ಸರ್ಕಾರ ನೇಮಕ ಮಾಡಲು ಮುಂದಾಗಿದೆ. ಅದನ್ನು ತಡೆಯಬೇಕು ಎಂದು ವಿನಂತಿಸಿ ‘ಕಾಮನ್‌ ಕಾಸ್‌’ ಎಂಬ ಎನ್‌ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ. ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಭರವಸೆ ನೀಡಿರುವುದರಿಂದ ಮಧ್ಯಾಂತರ ಆದೇಶ ನೀಡುವ ಅಗತ್ಯವೂ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

2014ರ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಲೋಕಪಾಲದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವ ಶೋಧನಾ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕದ ನೀತಿ ನಿಯಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ಸ್ಪಷ್ಟನೆ ನೀಡುವಂತೆ ಪೀಠವು ಏಪ್ರಿಲ್‌ ಒಂದರಂದು ಸರ್ಕಾರಕ್ಕೆ ಸೂಚನೆ ನೀಡಿತ್ತು.

ಕೆಲವು ನಿಯಮಗಳು ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಗೆ ವ್ಯತಿರಿಕ್ತವಾಗಿವೆ. ಈ ನೀತಿ ಅಡಿಯಲ್ಲಿ ನೇಮಕ ಕಾನೂನುಬಾಹಿರ ಮತ್ತು ಸ್ವೇಚ್ಛೆಯಿಂದ ಕೂಡಿದ್ದಾಗಿದೆ. ಅದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯೂ ಹೌದು. ಹಾಗಾಗಿ ನೇಮಕ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ನೇಮಕಾತಿ ನಿಯಮಗಳಲ್ಲಿ ಗಂಭೀರ ಲೋಪಗಳಿ­ದ್ದರೂ ಸರ್ಕಾರ ನೇಮಕಾತಿ ಮುಂದುವರಿಸುತ್ತಿದೆ ಎಂದು ಎನ್‌ಜಿಒ ದೂರಿತ್ತು. ಇದೇ ಕಾರಣಕ್ಕೆ ನ್ಯಾಯ­ಮೂರ್ತಿ ಕೆ.ಟಿ. ಥಾಮಸ್‌ ಅವರು ಅಧ್ಯಕ್ಷ ಸ್ಥಾನ ಮತ್ತು ನ್ಯಾಯವಾದಿ ಫಾಲಿ ನಾರಿಮನ್‌ ಸದಸ್ಯ ಸ್ಥಾನ ನಿರಾಕರಿಸಿದ್ದರು ಎಂದೂ ದೂರಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.