ADVERTISEMENT

ವಾಯುಪಡೆ ಮಾಜಿ ಮುಖ್ಯಸ್ಥ ತ್ಯಾಗಿ ವಿಚಾರಣೆ

ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ ಖರೀದಿ ಒಪ್ಪಂದಕ್ಕಾಗಿ ಲಂಚ

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:54 IST
Last Updated 2 ಮೇ 2016, 19:54 IST
ವಿಚಾರಣೆಗೆ ಹಾಜರಾಗಲು ಬಂದಿದ್ದ ವಾಯುಪಡೆ ಮಾಜಿ ಮುಖ್ಯಸ್ಥ ಎಸ್. ಪಿ. ತ್ಯಾಗಿ ಅವರನ್ನು ಮಾಧ್ಯಮದವರು ಪ್ರಶ್ನಿಸಿದರು  ಪಿಟಿಐ ಚಿತ್ರ
ವಿಚಾರಣೆಗೆ ಹಾಜರಾಗಲು ಬಂದಿದ್ದ ವಾಯುಪಡೆ ಮಾಜಿ ಮುಖ್ಯಸ್ಥ ಎಸ್. ಪಿ. ತ್ಯಾಗಿ ಅವರನ್ನು ಮಾಧ್ಯಮದವರು ಪ್ರಶ್ನಿಸಿದರು ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಯ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ  ಸಿಬಿಐ ಅಧಿಕಾರಿಗಳು ಭಾರತೀಯ ವಾಯು ಪಡೆಯ (ಐಎಎಫ್) ಮಾಜಿ ಮುಖ್ಯಸ್ಥ ಎಸ್. ಪಿ. ತ್ಯಾಗಿ ಅವರನ್ನು ಸೋಮವಾರ ಸುಮಾರು 10 ಗಂಟೆ ವಿಚಾರಣೆಗೆ ಒಳಪಡಿಸಿದ್ದಾರೆ.

ತ್ಯಾಗಿ ಅವರು ಬೆಳಿಗ್ಗೆ 10 ಗಂಟೆಗೆ ಸಿಬಿಐ ಪ್ರಧಾನ ಕಚೇರಿಗೆ ಬಂದು ತನಿಖಾ ಅಧಿಕಾರಿಗಳ ಎದುರು ಹಾಜರಾದರು.  ರಾತ್ರಿಯವರೆಗೂ ವಿಚಾರಣೆ ನಡೆದಿದೆ.

2007 ರಲ್ಲಿ ನಿವೃತ್ತಿ ಹೊಂದಿದ ಬಳಿಕ ಇಟಲಿಗೆ ಕೈಗೊಂಡ ಪ್ರವಾಸಕ್ಕೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸಲಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ.

ನಿವೃತ್ತಿಯ ನಂತರ ತ್ಯಾಗಿ ಅವರು ಫ್ಲಾರೆನ್ಸ್‌, ವೆನಿಸ್‌ ಮತ್ತು ಮಿಲಾನ್‌ಗೆ ಪ್ರವಾಸ ಕೈಗೊಂಡಿದ್ದರು. ತ್ಯಾಗಿ ಜತೆ ಇಟಲಿಗೆ ಯಾರೆಲ್ಲ ತೆರಳಿದ್ದರು ಮತ್ತು ಈ ಪ್ರವಾಸಕ್ಕೆ ಹಣ ನೀಡಿದ್ದು ಯಾರು ಎಂಬುದರ ಕುರಿತು ಅವರನ್ನು ಪ್ರಶ್ನಿಸಲಾಗಿದೆ.

‘ನನಗೆ ಹೇಳಲು ಇದ್ದ ಎಲ್ಲವನ್ನೂ ಸಿಬಿಐಗೆ ಹೇಳಿದ್ದೇನೆ. ನೀವು (ಮಾಧ್ಯಮದವರು) ಮನುಷ್ಯತ್ವ ಇಲ್ಲದವರು’ ಎಂದು ತಮ್ಮನ್ನು ಪ್ರಶ್ನಿಸಲು ಬಂದ ಸುದ್ದಿಗಾರರಿಗೆ ತ್ಯಾಗಿ ಪ್ರತ್ಯುತ್ತರ ನೀಡಿದರು.

ಭಾರತದ ಹೈಕೋರ್ಟ್‌ಗೆ ಸಮಾನವಾದ ಇಟಲಿಯ ನ್ಯಾಯಾಲಯದ ತೀರ್ಪಿನಲ್ಲಿ  ಹೆಲಿಕಾಪ್ಟರ್ ಖರೀದಿ ವ್ಯವಹಾರ ಯಾವ ರೀತಿ ನಡೆಯಿತು, ಆಗಸ್ಟಾ ವೆಸ್ಟ್‌ಲ್ಯಾಂಡ್  ಮತ್ತು ಫಿನ್‌ಮೆಕಾನಿಕಾ ಕಂಪೆನಿ ವ್ಯವಹಾರ ಕುದುರಿಸಲು ಭಾರತದ ಅಧಿಕಾರಿಗಳಿಗೆ ಮಧ್ಯವರ್ತಿಯ ಮೂಲಕ ಯಾವ ರೀತಿ ಲಂಚದ ಹಣ ಪಾವತಿ ಮಾಡಿವೆ ಎಂಬ ವಿವರಗಳು ಇವೆ.

ತೀರ್ಪಿನ ಅನೇಕ ಕಡೆಗಳಲ್ಲಿ ತ್ಯಾಗಿ ಅವರ ಹೆಸರು ಪ್ರಸ್ತಾಪವಾಗಿದೆ. ತ್ಯಾಗಿ ಮತ್ತು ಇತರ 13 ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

13 ಮಂದಿಯಲ್ಲಿ ತ್ಯಾಗಿ ಅವರ ಸಹೋದರ ಸಂಬಂಧಿ ಮತ್ತು ಯುರೋಪ್‌ನ ಮಧ್ಯವರ್ತಿಯೂ ಸೇರಿದ್ದಾರೆ. ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ  ಹೆಲಿಕಾಪ್ಟರ್ ಹಾರಾಟದ ಎತ್ತರದ ಮಿತಿಯನ್ನು ಆರು ಸಾವಿರ ಮೀಟರ್‌ನಿಂದ ನಾಲ್ಕು ಸಾವಿರ ಮೀಟರ್‌ಗೆ ಇಳಿಸುವ ನಿರ್ಧಾರವನ್ನು ತ್ಯಾಗಿ ತೆಗೆದುಕೊಂಡಿದ್ದರು ಎಂದು ಸಿಬಿಐ ಹೇಳಿದೆ.

ಪ್ರಧಾನಿ ಅವರ ಕಾರ್ಯಾಲಯ, ವಿಶೇಷ ರಕ್ಷಣಾ ದಳ (ಎಸ್‌ಪಿಜಿ) ಮತ್ತು ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜತೆ ಸಮಾಲೋಚಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಹೇಳಲಾಗಿದೆ.

ಹೊಸ ಪ್ರಶ್ನಾವಳಿ: ಇಟಲಿಯ ಮಿಲಾನ್ ನ್ಯಾಯಾಲಯದ ತೀರ್ಪಿನ ಪ್ರತಿ ಪಡೆದಿರುವ ಸಿಬಿಐ, ಈಗ ತ್ಯಾಗಿ ಅವರಿಗೆ ಹೊಸ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ನೀಡಿದೆ.

ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲಾ ಆಪಾದನೆಗಳನ್ನು ನಿರಾಕರಿಸಿರುವ ತ್ಯಾಗಿ ಅವರು, ‘ಹೆಲಿಕಾಪ್ಟರ್ ಹಾರಾಟದ ಎತ್ತರದ ಮೀತಿಯನ್ನು ಕಡಿಮೆ ಮಾಡುವ ನಿರ್ಧಾರವನ್ನು ಹಿರಿಯ ಅಧಿಕಾರಿಗಳ ತಂಡವು ತೆಗೆದುಕೊಂಡಿದೆ’ ಎಂದು ಹೇಳಿದ್ದಾರೆ. ಮೂರು ವರ್ಷಗಳ ಹಿಂದೆಯೇ ತ್ಯಾಗಿ ಅವರ ವಿಚಾರಣೆ ನಡೆಸಲಾಗಿತ್ತು. ಈಗ ಇಟಲಿ ನ್ಯಾಯಾಲಯದ ತೀರ್ಪಿನ ಪ್ರತಿ ದೊರಕಿರುವುದರಿಂದ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.