ADVERTISEMENT

ವಿಜ್ಞಾನಿಗಳ ಮುಂದಿದ್ದ ಸವಾಲುಗಳು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2014, 19:30 IST
Last Updated 24 ಸೆಪ್ಟೆಂಬರ್ 2014, 19:30 IST

ಭೂಮಿಯಿಂದ ಚಿಮ್ಮಿದ ಗಗನನೌಕೆ ಹಲವು ರೀತಿಯ ಉಷ್ಣತಾ ವಲಯಗಳಲ್ಲಿ ಸಾಗಬೇಕಿತ್ತು. ಅಂದರೆ, ಅಧಿಕ ಉಷ್ಣತೆಯಿಂದ ಹಿಡಿದು ತೀವ್ರ ತಣ್ಣನೆಯ ವಾತಾವರಣಗಳ ಮೂಲಕ ಹಾದು ಹೋದಾಗಲೂ ಅದರ ಕಾರ್ಯಕ್ಷಮತೆಗೆ ಧಕ್ಕೆಯಾಗಬಾರದು. ನೌಕೆ, ಅದರ ಬಿಡಿಭಾಗಗಳು ಹಾಗೂ ಅದರಲ್ಲಿ ಹುದುಗಿಸಿದ್ದ ಸಾಧನ– ಸಲಕರಣೆಗಳು ಅಂತರಿಕ್ಷದಲ್ಲಿನ ವಿಕಿರಣಶೀಲತೆಯನ್ನು ತಾಳಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು.

ಭೂಮಿಯಿಂದ ನೌಕೆಯ ಮಂಗಳ ಕಕ್ಷೆಗೆ ಇರುವ ‘ರೇಡಿಯೊ ದೂರ’ ಸುಮಾರು 21.5 ಕೋಟಿ ಕಿ.ಮೀ. ಅಂದರೆ ಇಷ್ಟು ದೂರಕ್ಕೆ ರೇಡಿಯೊ ಸಂಕೇತಗಳನ್ನು ಕಳುಹಿಸುವ ಹಾಗೂ ಅಲ್ಲಿಂದ ಬರುವ ಸಂಕೇತಗಳನ್ನು ಗ್ರಹಿಸುವ ದಕ್ಷ ಸಂವಹನ ವ್ಯವಸ್ಥೆ ಅತ್ಯಗತ್ಯ. ಇದಕ್ಕಾಗಿ ಇಸ್ರೊ ವಿಜ್ಞಾನಿಗಳು 40 ಕೋಟಿ ಕಿ.ಮೀ.ವರೆಗೆ ಸಂವಹನ ಸಾಮರ್ಥ್ಯವುಳ್ಳ ವ್ಯವಸ್ಥೆಯನ್ನು ನೌಕೆಗೆ ಅಳವಡಿಸಿದ್ದರು.

ಭೂ ಕಕ್ಷೆಗೆ ಹೋಲಿಸಿದರೆ ಮಂಗಳ ಕಕ್ಷೆಯಲ್ಲಿ ಸೌರಫಲಕಗಳಿಂದ ಆಗುವ ವಿದ್ಯುತ್‌ ಉತ್ಪಾದನೆ ಶೇ 35ರಿಂದ ಶೇ 50ರವರೆಗೆ ಕಡಿಮೆ ಇರುತ್ತದೆ. ಇದರಿಂದ ನೌಕೆಯ ಚಲನೆಗೆ ಶಕ್ತಿಯ ಕೊರತೆ ಎದುರಾಗ­ಬಾರದೆಂದು ಹಗಲಿನಲ್ಲಿ 840 ವಾಟ್‌ ವಿದ್ಯುತ್‌ ಉತ್ಪಾದಿಸಬಲ್ಲ 7.56 ಚದುರ ಮೀಟರ್‌ ವಿಸ್ತೀರ್ಣದ ಸೌರ ರೆಕ್ಕೆಗಳನ್ನು ಜೋಡಿಸಲಾಗಿತ್ತು.

ನೌಕೆಗೆ ನೂಕುಬಲ ಒದಗಿಸಲೆಂದು 440 ನ್ಯೂಟನ್‌ ಸಾಮರ್ಥ್ಯದ ದ್ರವ ಎಂಜಿನ್‌ ಮತ್ತು 22 ನ್ಯೂಟನ್‌ನ ಎಂಟು ಥ್ರಸ್ಟರ್‌ಗಳನ್ನು ಇರಿಸಲಾಗಿತ್ತು. ಇವುಗಳ ಟ್ಯಾಂಕ್‌ನಲ್ಲಿ 852 ಕೆ.ಜಿ. ನೂಕು ಇಂಧನವನ್ನು ತುಂಬಬಹುದಿತ್ತು. ಮಂಗಳನಿಂದ ಭೂಮಿಗೆ ರೇಡಿಯೊ ಸಂಕೇತ ತಲುಪಲು ಕನಿಷ್ಠ 6 ನಿಮಿಷದಿಂದ ಗರಿಷ್ಠ 43 ನಿಮಿಷ­ಗಳವರೆಗೆ ಸಮಯ ಹಿಡಿಯಬಹುದು.

ಹೀಗಾಗಿ ನೌಕೆಯಲ್ಲಿ ಏನಾದರೂ ದೋಷ ಕಂಡುಬಂದರೆ ಅದು ಇಲ್ಲಿಗೆ ತಲುಪಲು ಕನಿಷ್ಠ 6 ನಿಮಿಷವಾದರೂ ಬೇಕೇ ಬೇಕು. ಹಾಗೆಯೇ, ಇಲ್ಲಿಂದ ಮರು ಆಜ್ಞೆ ಕಳುಹಿಸಿದರೆ ಅದು ನೌಕೆಯನ್ನು ತಲುಪಲು ಕೂಡ ಕನಿಷ್ಠ ಅಷ್ಟೇ ಸಮಯ ಹಿಡಿಯುತ್ತದೆ. ಹೀಗಾಗಿ ಯಾವುದೇ ದೋಷ ಸರಿಪಡಿಸಲು ಏನಿಲ್ಲವೆಂದರೂ 12 ನಿಮಿಷ ಹಿಡಿದೇ ಹಿಡಿಯುತ್ತದೆ. ಈ ವಿಳಂಬ ತಪ್ಪಿಸಲು ನೌಕೆಯಲ್ಲಿ ಸ್ವಯಂಚಾಲಿತ ದೋಷ ನಿವಾರಣಾ ವ್ಯವಸ್ಥೆಯನ್ನೂ ಅಳವಡಿಸಬೇಕಿತ್ತು.

ಜನಸಾಮಾನ್ಯರಿಗೆ ಲಾಭಗಳೇನು?
* ಮಂಗಳನೌಕೆಯಲ್ಲಿರುವ ಸೌರಫಲಕ ಸ್ವತಃ ಬಿಚ್ಚಿಕೊಂಡು ೮೪೦ ವಾಟ್‌ಗಳಷ್ಟು ವಿದ್ಯುತ್ ಶಕ್ತಿಯನ್ನು ಸೂರ್ಯನ ಬೆಳಕಿನಲ್ಲೇ ಉತ್ಪಾದಿ­ಸುತ್ತದೆ. ಅಂದರೆ ೮೦ ಸಿಎಫ್‌ಎಲ್‌­ಗಳಷ್ಟು ಬೆಳಕನ್ನು ಹೊಮ್ಮಿಸುತ್ತದೆ. ಅದೇ ತಂತ್ರಜ್ಞಾನ ನಾಳೆ ನಮ್ಮ ಮನೆಮನೆಗೆ ಬಂದರೆ, ಮೂವತ್ತು ಲಕ್ಷ ಹಳ್ಳಿಗಳ ವಿದ್ಯುತ್‌್ ಅಭಾವ ನೀಗುತ್ತದೆ

* ಮಂಗಳನಲ್ಲಿ ಮೀಥೆನ್ ಅಂಶವನ್ನು ಗುರುತಿ­ಸಬಲ್ಲ ಅತಿ ಸೂಕ್ಷ್ಮ ಸಾಧನವನ್ನು ಇಸ್ರೊ ವಿಜ್ಞಾನಿಗಳು ರೂಪಿಸಿದ್ದಾರೆ. ನಮ್ಮ ಒಳಚ­ರಂಡಿಗಳಲ್ಲಿನ ಮೀಥೆನ್‌ ಅನ್ನೂ ಅದು ಅಳೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT