ADVERTISEMENT

ವಿದ್ಯಾರ್ಥಿನಿಯನ್ನು ಆಲಿಂಗಿಸಿದಕ್ಕೆ ಪ್ಲಸ್ ಟು ವಿದ್ಯಾರ್ಥಿ ವಿರುದ್ಧ ಶಿಸ್ತು ಕ್ರಮ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 5:31 IST
Last Updated 17 ಡಿಸೆಂಬರ್ 2017, 5:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ಇಲ್ಲಿನ ಮುಕ್ಕೋಲಾ ಎಂಬಲ್ಲಿರುವ ಸೇಂಟ್ ಥಾಮಸ್ ಸೆಂಟ್ರಲ್ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯೊಬ್ಬ ಪ್ಲಸ್ ಒನ್ ವಿದ್ಯಾರ್ಥಿಯೊಬ್ಬಳನ್ನು ಆಲಿಂಗಿಸಿದಕ್ಕೆ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಿದೆ. ವಿದ್ಯಾರ್ಥಿಯ ಮೇಲೆ ಶಾಲಾ  ಅಧಿಕೃತರು ಕೈಗೊಂಡ ಶಿಸ್ತು ಕ್ರಮ ಪ್ರಶ್ನಿಸಿ ವಿದ್ಯಾರ್ಥಿಯ ಹೆತ್ತವರು ಕೇರಳ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಸಿದ್ದಾರೆ.

ಪ್ಲಸ್ ಟು ವಿದ್ಯಾರ್ಥಿಯಾದ 16ರ ಹರೆಯದ ಹುಡುಗ ವಿದ್ಯಾರ್ಥಿನಿ ಶಾಲೆಯಲ್ಲಿ ಬಹುಮಾನ ಗೆದ್ದಾಗ ಆಕೆಯನ್ನು ಅಭಿನಂದಿಸಿ ಆಲಿಂಗನ ಮಾಡಿದ್ದನು. ಇದಾದ ನಂತರ ಆಕೆಯನ್ನು ಆಲಿಂಗಿಸಿರುವ ಫೋಟೊವನ್ನು ಸಾಮಾಜಿಕ ತಾಣದಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಜುಲೈ 21ರಂದು ಆ ಘಟನೆ ನಡೆದಿತ್ತು. ಆದರೆ ಫೋಟೊವನ್ನು ಸಾಮಾಜಿಕ ತಾಣದಲ್ಲಿ  ಅಪ್‍ಲೋಡ್ ಮಾಡಿದ್ದು ತಪ್ಪು. ಈ ಮೂಲಕ ವಿದ್ಯಾರ್ಥಿ ಶಾಲೆಯ ನಿಯಮಾವಳಿಯನ್ನು ಉಲ್ಲಂಘಿಸಿದ್ದಾನೆ ಎಂದು ಶಾಲಾ ಅಧಿಕೃತರು ಆತನ ವಿರುದ್ಧ ಕ್ರಮಕೈಗೊಂಡಿದ್ದರು.

ಆ ಬಗ್ಗೆ ಮಾದ್ಯಮದವರೊಂದಿಗೆ ಮಾತನಾಡಿದ  ಮಾರ್ ಥೋಮಾ ಚರ್ಚ್ ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿ ರಾಜನ್ ವರ್ಗೀಸ್, ವಿದ್ಯಾರ್ಥಿ ಶಾಲಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಟ್ರಾನ್ಸಫರ್ ಸರ್ಟಿಫಿಕೇಟ್ ನೀಡಲಾಗಿದೆ ಎಂದಿದ್ದಾರೆ.

ADVERTISEMENT

ಈ ಪ್ರಕರಣದಲ್ಲಿ  ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಬಾರದು. ಆತನಿಗೆ ಶಿಕ್ಷಣ  ಮುಂದುವರಿಸಲು ಅವಕಾಶ ನೀಡಬೇಕೆಂದು ಕೇರಳ ರಾಜ್ಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ಹೇಳಿತ್ತು.

ಆದಾಗ್ಯೂ, ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕ ಸದಸ್ಯ ಪೀಠವು, ಶಾಲೆಯ ಘನತೆ ಕಾಪಾಡುವ ವಿಚಾರವನ್ನು ಒಪ್ಪಿಕೊಂಡರೂ ಹೆತ್ತವರ ಪರಿಸ್ಥಿತಿಯನ್ನೂ ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಶಾಲಾ ಆಡಳಿತ ಮಂಡಳಿಗೆ ಹೇಳಿದೆ.ಅದೇ ವೇಳೆ ಈ ವಿಚಾರದಲ್ಲಿ ವಿದ್ಯಾರ್ಥಿನಿಯಾಗಲೀ ಆಕೆಯ ಹೆತ್ತವರಾಗಲೀ ಯಾವುದೇ ದೂರು ಸಲ್ಲಿಸಿಲ್ಲ ಎಂದು ಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.