ADVERTISEMENT

ವಿದ್ಯಾರ್ಥಿನಿಯರ ದಿರಿಸಿನ ಬಗ್ಗೆ ಸಹಾಯಕ ಪ್ರಾಧ್ಯಾಪಕ ಆಕ್ಷೇಪಾರ್ಹ ಹೇಳಿಕೆ

ಏಜೆನ್ಸೀಸ್
Published 20 ಮಾರ್ಚ್ 2018, 11:14 IST
Last Updated 20 ಮಾರ್ಚ್ 2018, 11:14 IST
ಮಹಿಳೆಯೊಬ್ಬರು ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಕೈಯಲ್ಲಿ ಹಿಡಿದಿರುವ ಚಿತ್ರವೊಂದನ್ನು ದಿವ್ಯಾ ಸನಾ ಎಂಬ ಮಹಿಳೆ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದು ವೈರಲ್ ಆಗಿದೆ. (ಚಿತ್ರ ಕೃಪೆ – ದಿವ್ಯಾ ಸನಾ ಅವರ ಫೇಸ್‌ಬುಕ್ ಖಾತೆ)
ಮಹಿಳೆಯೊಬ್ಬರು ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಕೈಯಲ್ಲಿ ಹಿಡಿದಿರುವ ಚಿತ್ರವೊಂದನ್ನು ದಿವ್ಯಾ ಸನಾ ಎಂಬ ಮಹಿಳೆ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದು ವೈರಲ್ ಆಗಿದೆ. (ಚಿತ್ರ ಕೃಪೆ – ದಿವ್ಯಾ ಸನಾ ಅವರ ಫೇಸ್‌ಬುಕ್ ಖಾತೆ)   

ಕೋಜಿಕ್ಕೋಡ್: ವಿದ್ಯಾರ್ಥಿನಿಯರ ದಿರಿಸಿನ ಬಗ್ಗೆ ಸಹಾಯಕ ಪ್ರಾಧ್ಯಾಪಕರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಕೇರಳದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.

ಅನೇಕ ಮಹಿಳೆಯರು ಫೇಸ್‌ಬುಕ್‌ನಲ್ಲಿ ಅರೆನಗ್ನ ಚಿತ್ರಗಳನ್ನು ಪ್ರಕಟಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಹೇಳಿಕೆ ನೀಡಿದ ಸಹಾಯಕ ಪ್ರಾಧ್ಯಾಪಕ ಕಾರ್ಯನಿರ್ವಹಿಸುವ ಕಾಲೇಜಿನ ಎದುರು ವಿದ್ಯಾರ್ಥಿಗಳು ‘ಕಲ್ಲಂಗಡಿ ಹಣ್ಣು’ ಪ್ರತಿಭಟನೆ ನಡೆಸಿದ್ದಾರೆ.

ಏನಿದು ಪ್ರಕರಣ?: ಕೋಜಿಕ್ಕೋಡ್‌ನ ಫಾರೂಕ್ ಟ್ರೈನಿಂಗ್ ಕಾಲೇಜಿನ ಸಹಾಯಕ ಪ್ರಧ್ಯಾಪಕ ಜೌಹರ್ ಮುನವ್ವಿರ್ ಟಿ ಎಂಬುವವರು ವಿದ್ಯಾರ್ಥಿನಿಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ADVERTISEMENT

‘ಶೇ 80ರಷ್ಟು ವಿದ್ಯಾರ್ಥಿನಿಯರೇ ಇರುವ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಾನು. ಇಲ್ಲಿನ ವಿದ್ಯಾರ್ಥಿನಿಯರು ಧಾರ್ಮಿಕ ಸಂಪ್ರದಾಯದಂತೆ ಉಡುಗೆ ತೊಡುತ್ತಿಲ್ಲ. ಹಿಜಾಬ್‌ನಿಂದ ಎದೆಯ ಭಾಗವನ್ನು ಸರಿಯಾಗಿ ಮುಚ್ಚಿಕೊಳ್ಳದೆ, ತುಂಡರಿಸಿದ ಕಲ್ಲಂಗಡಿ ಹಣ್ಣಿನಂತೆ ಪ್ರದರ್ಶಿಸುತ್ತಾರೆ’ ಎಂದು ಸಹಾಯಕ ಪ್ರಾಧ್ಯಾಪಕ ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ.

ಇದಕ್ಕೆ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಹಲವರು ‌ಅರೆನಗ್ನ ಚಿತ್ರಗಳನ್ನು ಪ್ರಕಟಿಸಿ ಪ್ರತಿಭಟನೆ ನಡೆಸಿದ್ದರೆ, ಇನ್ನು ಕೆಲವರು ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಕೈಯಲ್ಲಿ ಹಿಡಿದಿರುವ ಚಿತ್ರಗಳನ್ನು ಪ್ರಕಟಿಸಿದ್ದಾರೆ.

ಅರೆನಗ್ನ ಚಿತ್ರ ಪ್ರಕಟಿಸಿದ ಇಬ್ಬರು ಮಹಿಳೆಯರ ಖಾತೆಯನ್ನು ಫೇಸ್‌ಬುಕ್ ಬ್ಲಾಕ್ ಮಾಡಿದ್ದು, ಚಿತ್ರಗಳನ್ನು ತೆರವುಗೊಳಿಸಿದೆ.

ಮಹಿಳೆಯೊಬ್ಬರು ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಕೈಯಲ್ಲಿ ಹಿಡಿದಿರುವ ಚಿತ್ರವೊಂದನ್ನು ದಿವ್ಯಾ ಸನಾ ಎಂಬ ಮಹಿಳೆ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದು ವೈರಲ್ ಆಗಿದೆ.

ಕಾಲೇಜಿನ ಎದುರು ಪ್ರತಿಭಟನೆ: ಹೇಳಿಕೆ ಖಂಡಿಸಿ ಫಾರೂಕ್ ಟ್ರೈನಿಂಗ್ ಕಾಲೇಜಿನ ಎದುರು ಅನೇಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸಹಾಯಕ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ. ಅಲ್ಲದೆ, ಅರ್ಧ ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಅವರಿಗೆ ಕಳುಹಿಸುವುದಾಗಿ ಹೇಳಿದ್ದಾರೆ.

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಸಹಾಯಕ ಪ್ರಾಧ್ಯಾಪಕ ಜೌಹರ್ ಮುನವ್ವಿರ್ ಟಿ. (ಚಿತ್ರ ಕೃಪೆ – ‌ಫೇಸ್‌ಬುಕ್ ಖಾತೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.