ADVERTISEMENT

ವಿಮಾನ ಅಪಹರಣ ವರದಿ ಮಿಥ್ಯವೆಂದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 11:29 IST
Last Updated 28 ಮಾರ್ಚ್ 2015, 11:29 IST

ನವದೆಹಲಿ (ಪಿಟಿಐ): ಲಂಡನ್‌ನಿಂದ ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವೊಂದರಲ್ಲಿ ’ಅಪಹರಣದ ವಿಫಲ ಯತ್ನ’ ನಡೆದಿತ್ತು ಎಂಬ ಕೆಲ ಮಾಧ್ಯಮಗಳ ವರದಿಯನ್ನು ಏರ್‌ ಇಂಡಿಯಾ ಹಾಗೂ ವಿಮಾನಯಾನ ಅಧಿಕಾರಿಗಳು ಶನಿವಾರ ಅಲ್ಲಗಳೆದಿದ್ದಾರೆ.

ಮಾರ್ಚ್ 17ರಂದು ಲಂಡನ್‌ನ ಹೀಥ್ರೂ ನಿಲ್ದಾಣದಿಂದ ಹೊರಟ ಎಐ–112 ವಿಮಾನವು ನವದೆಹಲಿಯ ಇಂದಿರಾಗಾಂಧಿ ನಿಲ್ದಾಣಕ್ಕೆ ಬರುತ್ತಿತ್ತು.ಅದರಲ್ಲಿ ಒಬ್ಬ ಪ್ರಯಾಣಿಕ ‘ಅನಾರೋಗ್ಯ’ಕ್ಕೆ ಒಳಗಾದವರಂತೆ ನಟಿಸಿದ್ದರು. ವೈದರು ಎಂದು ಹೇಳಿಕೊಂಡು ಇತರ ಪ್ರಯಾಣಿಕರು ಅವರ ನೆರವಿಗೆ ಮುಂದಾದರು. ವೈದ್ಯರು ಹಾಗೂ ಅನಾರೋಗ್ಯ ಪೀಡಿತ ಪ್ರಯಾಣಿಕ ಎಲ್ಲರೂ ಪಾಕ್‌ ಪ್ರಜೆಗಳು ಹಾಗೂ ಅವರು ಕಾಕ್‌ಪಿಟ್‌ ಒಳಗೆ ಪ್ರವೇಶಿಸಲು ಯತ್ನಿಸಿದ್ದರು ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ.

ವರದಿ ನಿರಾಕರಿಸಿರುವ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ವಿ.ಸೋಮಸುಂದರಂ, ‘ಅದರಲ್ಲಿ ಸತ್ಯಾಂಶವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಏರ್‌ ಇಂಡಿಯಾ ಹೇಳಿದ್ದೇನು?: ಘಟನೆ ಸಂಬಂಧ ಪ್ರಕಟಣೆ ಹೊರಡಿಸಿರುವ ಏರ್ ಇಂಡಿಯಾ, ವರದಿಯಲ್ಲಿ ಕೇಳಿಬಂದಂತೆ ಅದರಲ್ಲಿ ಪಾಕಿಸ್ತಾನದ ಪ್ರಜೆಗಳು ಇರಲಿಲ್ಲ. ಅದೆಲ್ಲವೂ ಸಂಪೂರ್ಣ ಸುಳ್ಳು ಎಂದಿದೆ.

ಆದರೆ, ‘ಈ ವರದಿಗಳೆಲ್ಲವೂ ಸುಳ್ಳು. ಕಳೆದ ವಾರ ಒಬ್ಬ ಪ್ರಯಾಣಿಕರಿಗೆ ವೈದ್ಯಕೀಯ ನೆರವಿನ ಅಗತ್ಯ ಬಿದ್ದಿತ್ತು. ಅವರಿಗೆ ಮಹಿಳಾ ಸಹ ಪ್ರಯಾಣಿಕರೊಬ್ಬರು ನೆರವು ನೀಡಿದ್ದರು. ವೈದ್ಯಕೀಯ ನೆರವು ಯಾಚಿಸಿದ ಪ್ರಯಾಣಿಕರು ಬ್ರಿಟಿಷ್ ಪಾಸ್‌ಪೋರ್ಟ್‌ ಹೊಂದಿದ್ದರು. ಹಾಗೂ ಅವರಿಗೆ ನೆರವು ನೀಡಿದವರು ಭಾರತೀಯ ಮೂಲದವರು. ವರದಿಯಲ್ಲಿ ಹೇಳಿದಂತೆ ವಿಮಾನದಲ್ಲಿ ಯಾವುದೇ ಪಾಕ್ ಪ್ರಜೆಗಳು ಇರಲಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಅಲ್ಲದೇ, ‘ರೋಗಿ ಚಿಕಿತ್ಸೆಗೆ ಸ್ಪಂದಿಸಿದರು. ಬಳಿಕ ಪೈಲಟ್‌ ಅವರು ಸಿಬ್ಬಂದಿಯೊಂದಿಗೆ ಸಮಾಲೋಚಿಸಿದರು. ತದನಂತರ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡದಿರುವ ಅಥವಾ ಪಥ ಬದಲಿಸದಿರುವ ನಿರ್ಧಾರ ಕೈಗೊಂಡಿದ್ದರು’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.