ADVERTISEMENT

ವಿಮಾ ಮಸೂದೆಗೆ ಲೋಕಸಭೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2015, 14:18 IST
Last Updated 4 ಮಾರ್ಚ್ 2015, 14:18 IST

ನವದೆಹಲಿ (ಪಿಟಿಐ): ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿದ್ದ ಶೇಕಡ 49ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುವ ವಿಮಾ ಮಸೂದೆಗೆ ಬುಧವಾರ ಲೋಕಸಭೆ ಅನುಮೋದನೆ ನೀಡಿದೆ. ಆದರೆ ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಯು ಬಹುಮತದ ಕೊರತೆ ಎದುರಿಸುತ್ತಿದೆ.

ಸುಗ್ರೀವಾಜ್ಞೆಯನ್ನು ಕಾಯ್ದೆಯಾಗಿ ಪರಿವರ್ತಿಸುವ ವಿವಾದಾತ್ಮಕ ವಿಮಾ ಮಸೂದೆಯನ್ನು (ತಿದ್ದುಪಡಿ) ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ಪ್ರತಿ ಪಕ್ಷಗಳ ವಿರೋಧದ ನಡುವೆಯೂ ಮಂಡಿಸಿತ್ತು.

ತಿದ್ದುಪಡಿ ಮಸೂದೆಯು ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರದಲ್ಲಿ ನೋಂದಣಿ ಇಲ್ಲದೇ ಪಾಲಿಸಿಗಳನ್ನು ಮಾರಾಟ ಮಾಡುವ ಕಂಪೆನಿಗಳಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಅವಕಾಶ ನೀಡುತ್ತದೆ.

ADVERTISEMENT

ಈ ಮಸೂದೆಯು 2008ರಿಂದಲೂ ನನೆಗುದಿಗೆ ಬಿದ್ದಿತ್ತು. 

ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಶೇ 26ರಿಂದ ಶೇ 49ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ, ‘ನಮ್ಮ ದೇಶದಲ್ಲಿ ವಿಮೆಯ ಹರಿವು ಕಡಿಮೆಯಿದ್ದು, ದೇಶಕ್ಕೆ ಇದರ ಅಗತ್ಯವಿತ್ತು’ ಎಂದಿದ್ದಾರೆ.

ಬಡವರ ಬಗ್ಗೆ ಸಂಸದರು ವ್ಯಕ್ತಪಡಿಸಿದ ಆತಂಕಕ್ಕೆ ಪ್ರತಿಕ್ರಿಯಿಸಿದ ಸಿನ್ಹಾ,‘ಜನರ ಹಿತಾಸಕ್ತಿಯನ್ನು ಸಂಪೂರ್ಣ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಡವರಿಗಾಗಿ ಸರ್ಕಾರ ವಿವಿಧ ಪಾಲಿಸಿಗಳನ್ನು ತರುತ್ತಿದೆ’ ಎಂದಿದ್ದಾರೆ.

ಸದನದಲ್ಲಿ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಿನ್ಹಾ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಮಿತಿ ಶೇ 74ರಷ್ಟಿದ್ದರೇ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಮಿತಿ ಏಕೆ ಹೆಚ್ಚಿಸಬಾರದು? ಎಂದರು. ಚೀನಾ ಹಾಗೂ ಇತರ ರಾಷ್ಟ್ರಗಳು ವಿಮಾ ಕ್ಷೇತ್ರದಲ್ಲಿ ಗರಿಷ್ಠ ವಿದೇಶಿ ಹೂಡಿಕೆಗೆ ಅವಕಾಶ ನೀಡುತ್ತವೆ ಎಂದು ಉದಾಹರಿಸಿದರು. ‘ನಾವು ಜಾಗತಿಕ ಮಟ್ಟಕ್ಕಿಂತ ತುಂಬಾ ಕೆಳಗಿದ್ದೇವೆ’ ಎಂದೂ ನುಡಿದರು.

ಆದರೆ ಸಿನ್ಹಾ ಅವರ ಹೇಳಿಕೆಗೆ ಪ್ರತಿ ಪಕ್ಷಗಳ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸಿನ್ಹಾ ಅವರು ಕ್ಷಮೆ ಕೇಳಿದ ಬಳಿವಷ್ಟೇ ವಾಕ್ಸಮರ ಅಂತ್ಯ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.