ADVERTISEMENT

ವಿಯೆಟ್ನಾಂ ಜತೆ ಒಪ್ಪಂದಕ್ಕೆ ಚೀನಾ ಅಪಸ್ವರ

ಎರಡು ತೈಲ ಶೋಧ ಯೋಜನೆ ಕರಾರಿಗೆ ಸಹಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ):  ಚೀನಾದ ಆಕ್ಷೇಪಗಳ್ನು ಗಣನೆಗೆ ತೆಗೆದುಕೊಳ್ಳದೆ ದಕ್ಷಿಣ ಚೀನಾ ಸಮುದ್ರದಲ್ಲಿ ಹೈಡ್ರೊ ಕಾರ್ಬನ್‌ ಶೋಧ ನಡೆಸುವ ಒಪ್ಪಂದಕ್ಕೆ ಭಾರತ ಮತ್ತು ವಿಯೆಟ್ನಾಂ ಸಹಿ ಹಾಕಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ವಿಯಟ್ನಾಂ ಪ್ರಧಾನಿ ನುಗೆಯನ್ ಟಾನ್‌ ಡಂಗ್‌ ಉಭಯ ದೇಶಗಳ ನಡು­ವಣ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಮಂಗಳ­ವಾರ ಮಾತುಕತೆ ನಡೆಸಿದರು. ನೌಕಾಯಾನ ಮುಕ್ತಗೊಳಿಸುವುದು ಮತ್ತು ವಾಣಿಜ್ಯ ಅಲ್ಲದೇ ಸಾಗರ ವಿವಾದಗಳನ್ನು ಸೌಹಾರ್ದ­ಯುತವಾಗಿ ಪರಿಹರಿಸಿ­ಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು.

ದಕ್ಷಿಣ ಚೀನಾ ಸಮುದ್ರದಲ್ಲಿ ಮತ್ತೊಂದು ತೈಲ ಯೋಜನೆಗೆ ಎರಡೂ ದೇಶಗಳು ಒಪ್ಪಂದವೊಂದನ್ನು ಮಾಡಿ ಕೊಂಡಿವೆ. ಇದಲ್ಲದೆ ದಕ್ಷಿಣ ಚೀನಾ ಸಮುದ್ರದಲ್ಲಿ ತೈಲ ಮತ್ತು ಅನಿಲ ಶೋಧದ ಎರಡು ಸಹಭಾಗಿ ಯೋಜನೆ­ಗಳನ್ನು ಕೈಗೆತ್ತಿಕೊಳ್ಳಲು ಒಪ್ಪಿಕೊಳ್ಳ­ಲಾಗಿದೆ. ಈಗಾಗಲೇ ಮೂರು ತೈಲ ಶೋಧ ಯೋಜನೆಗಳನ್ನು ವಿಯೆಟ್ನಾಂ­ನಲ್ಲಿ ಭಾರತ ನಡೆಸುತ್ತಿದೆ. ಈಗ ಅಲ್ಲಿ ಭಾರತ ಹೊಂದಿರುವ ತೈಲ ಶೋಧ ಯೋಜನೆಗಳ ಸಂಖ್ಯೆ ಐದಕ್ಕೆ ಏರಿದೆ.

ಓಎನ್‌ಜಿಸಿ ವಿದೇಶ್‌ ಲಿಮಿಟೆಡ್‌ (ಒವಿಎಲ್‌) ಮತ್ತು ಪೆಟ್ರೊ ವಿಯೆ­ಟ್ನಾಂ  ನಡುವೆ ಒಪ್ಪಂದ ನಡೆದಿದೆ. ಒಪ್ಪಂದದ ಪ್ರಕಾರ ಭಾರತ ಮತ್ತು ವಿಯೆಟ್ನಾಂ ನಡುವೆ ಹೈಡ್ರೊ ಕಾರ್ಬನ್‌ ಕ್ಷೇತ್ರದಲ್ಲಿ ಸಹಕಾರಕ್ಕೆ ಅನುಕೂಲ ವಾಗಲಿದೆ. ವಿಯೆಟ್ನಾಂನಲ್ಲಿ ತೈಲ ಆವಿಷ್ಕಾರಕ್ಕೆ ಆ ದೇಶ ಒವಿಎಲ್‌ಗೆ ಆಹ್ವಾನವನ್ನೂ ನೀಡುತ್ತದೆ.  ಇದರಿಂದ ಎರಡೂ ದೇಶಗಳ ಇಂಧನ ವಲಯಕ್ಕೆ ನೆರವಾಗಲಿದೆ.

‘ವಿಯೆಟ್ನಾಂ ಜತೆ ತೈಲ ಆವಿಷ್ಕಾರಕ್ಕೆ ಮಾಡಿಕೊಂಡಿರುವ ಒಪ್ಪಂದದಿಂದ ಉಭಯ ದೇಶಗಳ ನಡುವೆ ಶಾಂತಿ ಮತ್ತು ಸ್ಥಿರತೆಗೆ ಸಹಕಾರವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸುದ್ದಿಗಾರರಿಗೆ ತಿಳಿಸಿದರು. ಇದಲ್ಲದೆ ರಕ್ಷಣೆ, ಭದ್ರತೆ, ವ್ಯಾಪಾರ ಮತ್ತು ಭಯೋತ್ಪಾದನೆ ತಡೆ ಸಹಕಾರ ಒಪ್ಪಂದಗಳಿಗೂ ಸಹಿ ಹಾಕಲಾಗಿದೆ.

ಚೀನಾ ವಿರೋಧ
ಬೀಜಿಂಗ್‌ ವರದಿ:
ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತ ಮತ್ತು ವಿಯೆಟ್ನಾಂ ಜಂಟಿಯಾಗಿ ತೈಲ  ಶೋಧನೆ­­­ಗಾಗಿ ಒಪ್ಪಂದ ಮಾಡಿಕೊಂಡಿ­ರುವುದಕ್ಕೆ ಚೀನಾ ವಿರೋಧ ವ್ಯಕ್ತಪಡಿ­ಸಿದೆ. ಈ ಒಪ್ಪಂದ ತನ್ನ ಸಾರ್ವಭೌಮತ್ವ ಮತ್ತು ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿದರೆ ಅದನ್ನು ಬಲವಾಗಿ ವಿರೋಧಿಸುವುದಾಗಿ ಚೀನಾ ಹೇಳಿದೆ.

ಈ ನಿಟ್ಟಿನಲ್ಲಿ ಚೀನಾದ ನಿಲುವು ದೃಢವಾಗಿದೆ ಎಂದು ಚೀನಾ ವಿದೇಶಾಂಗ  ಸಚಿವಾಲಯದ ವಕ್ತಾರ ಹೋಂಗ್‌್ ಲೀ ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿನ ಇಂಧನ ಹಂಚಿಕೆ ಸಂಬಂಧ ವಿಯೆಟ್ನಾಂ ಮತ್ತು ಚೀನಾ ಬದ್ಧವೈರತ್ವ ಹೊಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.