ADVERTISEMENT

ವಿವಾದದಲ್ಲಿ ಸದಾಶಿವಂ ನೇಮಕಾತಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ತಿರುವನಂತಪುರ: ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾ­­ಶಿವಂ ಅವರನ್ನು ಕೇರಳ ರಾಜ್ಯ­ಪಾ­ಲ­­ರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂಬ ವರ­­­­ದಿಯು ರಾಜಕೀಯ ಮತ್ತು ಕಾನೂನು ವಲ­ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನದಿಂದ ನಿವೃತ್ತಿಗೊಂಡ­ವ­­ರನ್ನು ರಾಜ್ಯಪಾಲರ ಹುದ್ದೆಗೆ ಪರಿಗ­ಣಿ­­­ಸುತ್ತಿರುವ ವಿಚಾರಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ­ಬರುತ್ತಿ­ದ್ದರೂ ಕೇಂದ್ರ ಗೃಹ ಸಚಿವಾಲಯವು ಸದಾಶಿವಂ ನೇಮಕಕ್ಕೆ ಸಂಬಂಧಿಸಿದ ಕಡತ­ವನ್ನು ಗೃಹಸಚಿವಾಲಯವು ರಾಷ್ಟ್ರಪತಿ ಭವನಕ್ಕೆ  ಕಳುಹಿ­ಸಿದೆ.

ರಾಜ್ಯಪಾಲರ ಹುದ್ದೆಗೆ ಸದಾಶಿವಂ ಅವರನ್ನು ನೇಮಿಸುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೂ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.

ಈ  ಬಗ್ಗೆ ಕೇಂದ್ರ ಸರ್ಕಾರ ತಮ್ಮನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದು ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಹೇಳಿ­ದ್ದಾರೆ.

ಸದಾಶಿವಂ ಸಮರ್ಥನೆ: ಕೇರಳ ರಾಜ್ಯ­ಪಾ­ಲ­­ರಾಗಿ ತಮ್ಮನ್ನು ನೇಮಕ ಮಾಡುವ ಸಾಧ್ಯತೆಯನ್ನು ಸದಾಶಿವಂ ಸಮರ್ಥಿಸಿಕೊಂಡಿದ್ದಾರೆ.

ನಿವೃತ್ತ ನ್ಯಾಯಮೂರ್ತಿಗಳನ್ನು ರಾಜ್ಯಪಾಲರ ಹುದ್ದೆಗೆ ನೇಮಕ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿರುವ ಅವರು, ಅನಗತ್ಯ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಆಪಾದನೆಯನ್ನು ತಳ್ಳಿ ಹಾಕಿದ್ದಾರೆ.

ತುಳಸಿರಾಂ ಪ್ರಜಾಪತಿ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಅಮಿತ್‌ ಷಾ ವಿರುದ್ಧ ಸಲ್ಲಿಸಲಾಗಿದ್ದ ಎರಡನೇ ಎಫ್ಐಆರ್ ರದ್ದುಪಡಿಸಿರುವ ತಮ್ಮ ತೀರ್ಪಿಗೂ ಈಗ ಪ್ರಸ್ತಾವಿತ ರಾಜ್ಯಪಾಲರ ಹುದ್ದೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಕೀಲರ ಸಂಘದ ವಿರೋಧ: ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದಿದ ಸ್ವಲ್ಪ ಸಮಯದಲ್ಲೇ ಸದಾಶಿವಂ ಅವರನ್ನು ರಾಜ್ಯಪಾಲರ ಹುದ್ದೆಗೆ ಪರಿಗಣಿಸಿದರೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಅದಿಶ್ ಸಿ. ಅಗರವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಹುದ್ದೆಯ ಬದಲು ಸದಾಶಿವಂ ಅವರನ್ನು ಲೋಕಪಾಲ ಹುದ್ದೆಗೆ ಪರಿಗಣಿಸಿದ್ದರೆ ಸೂಕ್ತ­ವಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಪಾಲರ ಹುದ್ದೆಗೆ ಸದಾಶಿವಂ ಅವರನ್ನು ಪರಿಗಣಿಸಿದರೆ ಇದೊಂದು ಸಂಪೂರ್ಣ ರಾಜಕೀಯ ನಡೆ ಎಂದೇ ಭಾವಿಸಬೇಕಾಗುತ್ತದೆ ಮತ್ತು ಸೂಕ್ತ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ನೇಮಕಾತಿಯನ್ನು ವಿರೋಧಿಸಿ ತಾವು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆದಿರುವದಾಗಿ ಅಗರವಾಲ್ ತಿಳಿಸಿದ್ದಾರೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರೂ ಉದ್ದೇಶಿತ ನೇಮಕಾತಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಇಂತಹ ನೇಮಕಾತಿಗೆ ಒಪ್ಪಿಕೊಂಡರೆ ನ್ಯಾಯಾಂಗದ ಸ್ವಾತಂತ್ರ್ಯದ ಜತೆ ರಾಜಿ ಮಾಡಿಕೊಂಡಂತೆ ಎಂದು ತಿಳಿಸಿದ್ದಾರೆ.

ನ್ಯಾಯಾಂಗ ವಿಚಾರಣೆ ಆಯೋಗದ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಹುದ್ದೆಗಳಿಗೆ ನಿವೃತ್ತಿಯ ಎರಡು ವರ್ಷಗಳ ನಂತರ ನ್ಯಾಯಮೂರ್ತಿಗಳನ್ನು ಪರಿಗಣಿಸುವುದು ಒಳಿತು ಎಂದು ಸುಪ್ರೀಂಕೊರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಟಿ. ಥಾಮಸ್ ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.