ADVERTISEMENT

ವಿಶೇಷ ಮಕ್ಕಳಿಗೆ 18ರ ವರೆಗೆ ಉಚಿತ ಶಿಕ್ಷಣ

ಪೂರಕ ಪರಿಸರ, ವ್ಯವಸ್ಥೆ ರೂಪಿಸಲು ಎಲ್ಲ ರಾಜ್ಯಗಳಿಗೆ ಕೇಂದ್ರ ಸೂಚನೆ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ನವದೆಹಲಿ: ದೈಹಿಕ ಮತ್ತು ಮಾನಸಿಕ ನ್ಯೂನತೆ ಹೊಂದಿರುವ ವಿಶೇಷ ಮಕ್ಕಳಿಗೆ 18 ವರ್ಷ ತುಂಬುವವರೆಗೂ ಉಚಿತ ಶಿಕ್ಷಣ ನೀಡುವಂತೆ ಕೇಂದ್ರ ಸರ್ಕಾರ ಬುಧವಾರ ಎಲ್ಲ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇಂಥ ಮಕ್ಕಳು ಇನ್ನುಳಿದ ಸಾಮಾನ್ಯ ಮಕ್ಕಳೊಂದಿಗೆ ಬೆರೆತು ಕಲಿಯಲು ಅನುಕೂಲವಾಗುವ ಪರಿಸರ ಮತ್ತು ತರಗತಿಗಳು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿರಬೇಕು. ಆಯಾ ರಾಜ್ಯಗಳ ಶಿಕ್ಷಣ ಇಲಾಖೆ ಮುಖ್ಯಸ್ಥರು ನೇರ ನಿಗಾ ಇಡಬೇಕು ಎಂದು ಕೇಂದ್ರ ಹೇಳಿದೆ.

ಪಠ್ಯ, ಪರೀಕ್ಷೆಯಲ್ಲಿ ವಿನಾಯಿತಿ

ADVERTISEMENT

ವಿಶೇಷ ಕಾಳಜಿ, ಆರೈಕೆ ಅಗತ್ಯವಿರುವ ಮಕ್ಕಳ ಬುದ್ಧಿ ಮತ್ತು ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯ ಮತ್ತು ಪರೀಕ್ಷಾ ವಿಧಾನಗಳಲ್ಲಿ ಅಗತ್ಯ ಮಾರ್ಪಾಡು ಮಾಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಇದೇ ಮೊದಲ ಬಾರಿಗೆ ಸೂಚಿಸಿದೆ.

ಇಂಥ ಮಕ್ಕಳಿಗೆ ಶಾಲೆ, ಪಠ್ಯ ಮತ್ತು ಪರೀಕ್ಷಾ ವಿಧಾನದಲ್ಲಿ ವಿಶೇಷ ವಿನಾಯಿತಿ ನೀಡುವಂತೆಯೂ ಸಲಹೆ ಮಾಡಿದೆ. ಪರೀಕ್ಷೆ ಬರೆಯಲು ಸಹಾಯಕರ ನೇಮಕ, ಹೆಚ್ಚಿನ ಸಮಯಾವಕಾಶ, ಎರಡು ಮತ್ತು ಮೂರನೇ ಭಾಷೆ ಕಲಿಕೆಯಿಂದ ವಿನಾಯಿತಿ ನೀಡುವುದು ಸೇರಿದಂತೆ ಅನೇಕ ಶಿಫಾರಸು ಮಾಡಿದೆ.

ಇದೇ ಏಪ್ರಿಲ್‌ 19ರಂದು ಜಾರಿಯಾದ ‘ಮಾನಸಿಕ, ದೈಹಿಕ ನ್ಯೂನತೆಯುಳ್ಳ ವ್ಯಕ್ತಿಗಳ ಹಕ್ಕು ರಕ್ಷಣಾ ಪರಿಷ್ಕೃತ ಕಾಯಿದೆ (ಆರ್‌ಪಿಡಬ್ಲ್ಯುಡಿ)–2016’ ಇಂಥ ಮಕ್ಕಳ ಶೈಕ್ಷಣಿಕ ಸೌಲಭ್ಯ ಮತ್ತು ವಿನಾಯಿತಿ ಕುರಿತು ಸ್ಪಷ್ಟ ನಿಯಮಗಳನ್ನು ಹೊಂದಿದೆ.

ಆದರೂ, ದೇಶದ ಹೆಚ್ಚಿನ ಶಾಲೆಗಳಲ್ಲಿ ವಿಶೇಷ ಮಕ್ಕಳಿಗೆ ಪ್ರವೇಶ ನೀಡಲು ನಿರಾಕರಿಸುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಕಾರಣ ಈ ಸೂಚನೆ ಹೊರಡಿಸಲಾಗಿದೆ ಎಚ್ಆರ್‌ಡಿ ಹೇಳಿದೆ.

ಆರ್‌ಪಿಡಬ್ಲ್ಯುಡಿ  ಪರಿಷ್ಕೃತ ಕಾಯಿದೆ –2016 ಹೇಳುವುದೇನು?

* ವಿಶೇಷ ಸಾಮರ್ಥ್ಯದ ಮಕ್ಕಳ ಕಲಿಕೆಗೆ ಶಾಲೆಯಲ್ಲಿ ಪೂರಕ ವಾತಾವರಣ ನಿರ್ಮಾಣ

* ಸಂಜ್ಞೆ, ಬ್ರೈಲ್‌ ಲಿಪಿ, ಶ್ರವಣ ಮತ್ತು ವಾಕ್‌ ದೋಷ ಕೌಶಲಗಳ ಕಲಿಕೆಗೆ ವಿಶೇಷ ಶಿಕ್ಷಕರ ನೇಮಕ

*  ವಿಶೇಷ ಕಲಿಕಾ ಕೌಶಲ ಬೋಧಿಸುವ ಶಿಕ್ಷಕರ ತರಬೇತಿ ಕೇಂದ್ರಗಳ ಸ್ಥಾಪನೆ

* ಉಚಿತವಾಗಿ ಪಠ್ಯ ಪುಸ್ತಕ, ಕಲಿಕಾ ಸಾಮಗ್ರಿ, ನೆರವು ಸಾಧನ ಪೂರೈಕೆ

* ಹೆಚ್ಚಿನ ನ್ಯೂನತೆಯುಳ್ಳ ಮಕ್ಕಳಿಗೆ ವಿದ್ಯಾರ್ಥಿವೇತನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.