ADVERTISEMENT

ವಿಶ್ವಾಸಮತಕ್ಕೆ ‘ಸುಪ್ರೀಂ’ಸೂಚನೆ

ಉತ್ತರಾಖಂಡ: ಮೇ 10 ರಂದು ರಾವತ್‌ ಭವಿಷ್ಯ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:40 IST
Last Updated 6 ಮೇ 2016, 19:40 IST
ವಿಶ್ವಾಸಮತಕ್ಕೆ ‘ಸುಪ್ರೀಂ’ಸೂಚನೆ
ವಿಶ್ವಾಸಮತಕ್ಕೆ ‘ಸುಪ್ರೀಂ’ಸೂಚನೆ   

ನವದೆಹಲಿ: ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಉತ್ತರಾಖಂಡದಲ್ಲಿ ಮೇ 10ರಂದು ಬಹುಮತ ಸಾಬೀತುಪಡಿಸುವಂತೆ ಪದಚ್ಯುತ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರಿಗೆ ಸುಪ್ರೀಂಕೋರ್ಟ್‌ ಸೂಚಿಸಿದೆ.

‘ಮಂಗಳವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ವಿಶ್ವಾಸಮತ ಸಾಬೀತು ಪ್ರಕ್ರಿಯೆ ನಡೆಯಲಿದೆ’ ಎಂದು  ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್‌ ಅವರಿದ್ದ ಪೀಠ ಶುಕ್ರವಾರ ಹೇಳಿದೆ.

ಬಹುಮತ ಸಾಬೀತು ಪ್ರಕ್ರಿಯೆ ಬಗ್ಗೆ ವಿವರಗಳನ್ನು ನೀಡಿರುವ ಪೀಠ, ‘ಕಲಾಪ ನಡೆಯುವ ಎರಡು ಗಂಟೆ ರಾಷ್ಟ್ರಪತಿ ಆಳ್ವಿಕೆಯನ್ನು ಸ್ಥಗಿತಗೊಳಿಸಲಾಗುವುದು. ಈ ಅವಧಿಯಲ್ಲಿ ರಾಜ್ಯಪಾಲರು ಆಡಳಿತ ಉಸ್ತುವಾರಿಯನ್ನು ನೋಡಿಕೊಳ್ಳುವರು.

‘ಬಲಾಬಲ ಪರೀಕ್ಷೆಯ ಫಲಿತಾಂಶ ಮತ್ತು ವಿಡಿಯೊ ಒಳಗೊಂಡಂತೆ ಕಲಾಪಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪ್ರಧಾನ ಕಾರ್ಯದರ್ಶಿಯವರು ಮುಚ್ಚಿದ ಲಕೋಟೆಯಲ್ಲಿ ಮೇ 11 ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ಸೂಚಿಸಿದೆ.

‘ಎಲ್ಲ ಅರ್ಹ ಸದಸ್ಯರು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಪೀಠ ನಿರ್ದೇಶಿಸಿದೆ.

ಹೊರಗಿನವರನ್ನು ವೀಕ್ಷರನ್ನಾಗಿ ನೇಮಿಸಬೇಕು ಎಂಬ ಕೇಂದ್ರ ಸರ್ಕಾರದ ಕೋರಿಕೆಯನ್ನು ಪೀಠ ತಳ್ಳಿಹಾಕಿತು.

ಅನರ್ಹ ಶಾಸಕರಿಗೆ ಅವಕಾಶವಿಲ್ಲ: ಅನರ್ಹಗೊಂಡಿರುವ ಒಂಬತ್ತು ಶಾಸಕರು  ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಪೀಠ ಹೇಳಿದೆ. ಒಂಬತ್ತು ಶಾಸಕರು ಅನರ್ಹಗೊಂಡಿರುವ ಕಾರಣ ವಿಧಾನಸಭೆಯ ಸಂಖ್ಯಾಬಲ 61ಕ್ಕೆ ಕುಸಿದಿದೆ. ಹಾಗಾಗಿ ರಾವತ್‌ಗೆ ವಿಶ್ವಾಸಮತ ಸಾಬೀತುಪಡಿಸಲು 31 ಸದಸ್ಯರ ಬೆಂಬಲ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.