ADVERTISEMENT

ವಿಶ್ವ ಯೋಗ ದಿನ: ವಿಶ್ವ ದಾಖಲೆಗೆ ಸಿದ್ಧತೆ

ಪ್ರಧಾನಿ ಮೋದಿ ಯೋಗ ಪ್ರದರ್ಶನ ಸಾಧ್ಯತೆ; ಅಮೆರಿಕದಲ್ಲೂ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 14:30 IST
Last Updated 4 ಜೂನ್ 2015, 14:30 IST

ನವದೆಹಲಿ/ಶಿಮ್ಲಾ(ಪಿಟಿಐ,ಐಎಎನ್ ಎಸ್): 40 ಸಾವಿರ ಜನ ಏಕ ಕಾಲದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಜೂನ್ 21ರ ‘ವಿಶ್ವ ಯೋಗ ದಿನ’ದಂದು ವಿಶ್ವ ದಾಖಲೆ ಮಾಡಿ ಗಿನ್ನಿಸ್ ಬುಕ್ ನಲ್ಲಿ ಸ್ಥಾನ ಪಡೆಯಲು ಕೇಂದ್ರ ಆಯುಷ್ ಸಚಿವಾಲಯ ಚಿಂತನೆ ನಡೆಸಿದೆ. ಪ್ರಧಾನಿ ಇದರ ನೇತೃತ್ವ ವಹಿಸಲಿದ್ದಾರೆ.

ದೆಹಲಿಯ ರಾಜಪಥ್ ನಲ್ಲಿ ಜೂನ್ 21ರಂದು ಬೆಳಿಗ್ಗೆ 7ಕ್ಕೆ ಸಾಮೂಹಿಕ ಯೋಗ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 35 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ, ಸಚಿವಾಲಯ ಅಷ್ಟೂ ಜನರಿಗೆ ಸಾಕಾಗುವಷ್ಟು ‘ಮ್ಯಾಟ್’(ಅಭ್ಯಾಸಕ್ಕೆ ಪೂರಕವಾದ ನೆಲ ಹಾಸು) ಒದಗಿಸಲು ಕ್ರಮ ಕೈಗೊಂಡಿದೆ. ಸಚಿವಾಲಯ ಈ ಕಾರ್ಯಕ್ರಮವನ್ನು ಗಿನ್ನಿಸ್ ದಾಖಲೆಗೆ ಸೇರಿಸಲು ಚಿಂತನೆ ನಡೆಸಿದೆ. ಇದೊಂದು ಸವಾಲಿನ ಕೆಲಸವೇ ಸರಿ. ಇದಕ್ಕಾಗಿ ಎಲ್ಲಾ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮೂಹಿಕ ಯೋಗ ಪ್ರದರ್ಶನಕ್ಕೆ ನೋಂದಣಿ ನಡೆದಿದೆ. 35 ನಿಮಿಷಗಳ ಸಾಮೂಹಿಕ ಯೋಗ ಕಾರ್ಯಕ್ರಮವಿದ್ದು, ವಿವಿಧ ಆಸನಗಳ ಪ್ರದರ್ಶನ ನಡೆಯಲಿದೆ. ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಇತರ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ನೇತೃತ್ವ: ಬೃಹತ್ ಸಾಮೂಹಿಕ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿಯಲ್ಲಿ ನಡೆಯಲಿದ್ದು, ಮೋದಿ ಅವರು ಕೂಡಾ ಯೋಗ ಪ್ರದರ್ಶನದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯೋಗ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ ನಾಯ್ಕ್ ಹೇಳಿದ್ದಾರೆ.

‘ಯೋಗ’ ಆರೋಗ್ಯ ಮತ್ತು ಯೋಗಕ್ಷೇಮದ ಒಂದು ಸಮಗ್ರ ವಿಧಾನವಾಗಿದೆ ಎಂದು ಗುರುತಿಸಿರುವ ವಿಶ್ವಸಂಸ್ಥೆಯ ಮಹಾಸಭೆಯು ಕಳೆದ ವರ್ಷ ಡಿಸೆಂಬರ್ ನಲ್ಲಿ ಜೂನ್ 21ನ್ನು ‘ಅಂತರರಾಷ್ಟ್ರೀಯ ಯೋಗ ದಿನ’ ಎಂದು ಘೋಷಣೆ ಮಾಡಿತ್ತು. ಇದರ ಫಲವಾಗಿ ವಿಶ್ವದ 175 ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡಿವೆ.

ಪರಂಪರೆ: ಭಾರತದ ಪ್ರಾಚೀನ ಸಂಸ್ಕೃತಿಯಲ್ಲೊಂದಾಗಿ ಬೆಳೆದು ಬಂದ ಯೋಗ ಪದ್ಧತಿ ಭಾರತೀಯರ ಆರೋಗ್ಯ ಕುರಿತಾಗಿ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಪತಂಜಲ ಮಹಾಮುನಿ ಯೋಗದ ಪಿತಾಮಹ ಎಂದು ಗುರುತಿಸಿಕೊಂಡಿದ್ದು, ‘ಅಷ್ಠಾಂಗ ಯೋಗ’ದ ಕುರಿತು ಹೇಳಿದ್ದಾರೆ.

500 ಶಿಬಿರ: ಆಧುನಿಕ ಜಿವನಶೈಲಿಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೆ ಯೋಗದಿಂದಾಗುವ ಲಾಭಗಳು, ಪರಿಣಾಮಗಳ ಅಧ್ಯಯನಕ್ಕಾಗಿ ಜೂನ್ 21ರಂದು ವಿಶ್ವ ಯೋಗ ದಿನದ ಅಂಗವಾಗಿ ದೇಶಾದ್ಯಂತ 500 ಶಿಬಿರಗಳನ್ನು ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಗುರುವಾರ ಹೇಳಿದ್ದಾರೆ.

ಹಿಂದಿನಿಂದಲೂ ನಾವು ಸಾಂಕ್ರಾಮಿಕ ರೋಗಗಳ ತಡೆಗೆ ಒತ್ತು ನೀಡುತ್ತಾ ಬಂದಿದ್ದೇವೆ. ಆದರೆ, ಪ್ರಸ್ತುತ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಾಗುತ್ತಿವೆ. ಆಧುನಿಕ ಜೀವನಶೈಲಿಯಿಂದ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ.

ಅಮೆರಿಕದಲ್ಲಿ ಯೋಗ: ವಿಶ್ವ ಯೋಗ ದಿನಕ್ಕೆ ಕೈ ಜೋಡಿಸಿರುವ ಅನಿವಾಸಿ ಭಾರತೀಯರು ಅಮೆರಿಕದಲ್ಲಿನ 100 ನಗರಗಳಲ್ಲಿ ವಿವಿಧ 70 ಸಂಘಟನೆಗಳ ನೇತೃತ್ವದಲ್ಲಿ ಮೊದಲ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಹಮ್ಮಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.