ADVERTISEMENT

ವ್ಯಾಪಂ: ಬಿಜೆಪಿಯಲ್ಲಿ ಒಡಕು

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST

ನವದೆಹಲಿ/ಭೋಪಾಲ್‌: ದೇಶದಾದ್ಯಂತ ಸುದ್ದಿ ಮಾಡಿರುವ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(ವ್ಯಾಪಂ) ನೇಮಕಾತಿ ಹಗರಣವು ಆಡಳಿತಾರೂಢ ಬಿಜೆಪಿಯಲ್ಲಿನ ಒಡಕನ್ನು  ಬಯಲಿಗೆ ತಂದಿದೆ.

‘ವ್ಯಾಪಂಗೆ ಸಂಬಂಧಿಸಿದ ಸಾವಿನ ಸರಣಿ ನನ್ನಲ್ಲಿ ಭೀತಿ ಮೂಡಿಸಿದೆ. ರಾಜ್ಯದ ಜನರು ಭಯದ ನೆರಳಲ್ಲಿ ಬದು ಕುತ್ತಿದ್ದಾರೆ’ ಎಂದು ಸಚಿವೆ  ಉಮಾ ಭಾರತಿ ಆತಂಕ ವ್ಯಕ್ತಪಡಿಸಿದ್ದಾರೆ.  ಇಂಡಿಯಾ ಟುಡೆ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, ‘ಹಗರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ’ ಎಂದು ಉಮಾ ಹೇಳಿದರು.  ಆ ಷಡ್ಯಂತ್ರ ಯಾವುದು ಎಂಬುವುದನ್ನು ಅವರು ಬಿಡಿಸಿ ಹೇಳಲಿಲ್ಲ. ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಕಾಣಿಸಿಕೊಂಡಿರುವುದಕ್ಕೆ ದಿಗ್ಭ್ರಮೆ  ವ್ಯಕ್ತಪಡಿಸಿದರು.

ಗೌರ್‌ ಅಪಸ್ವರ: ಹಗರಣಕ್ಕೆ ಸಂಬಂಧಿ ಸಿದಂತೆ  ಪ್ರಮುಖ ನಿರ್ಧಾರ ತೆಗೆದು ಕೊಳ್ಳುವ ಮುನ್ನ  ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್ ತಮ್ಮನ್ನು ಸಂಪರ್ಕಿಸಿಲ್ಲ ಎಂದು  ಗೃಹ ಸಚಿವ ಬಾಬುಲಾಲ್ ಗೌರ್‌ ಅಸಮಾಧಾನ ಹೊರಹಾಕಿದ್ದಾರೆ. ‘ಹಗರಣದಲ್ಲಿ ರಾಜ್ಯಪಾಲ ರಾಮ್  ನರೇಶ್‌ ಯಾದವ್‌ ವಿರುದ್ಧ ಆರೋಪ ಕೇಳಿ ಬಂದ ನಂತರ ಹೈಕೋರ್ಟ್‌ ಅವರಿಗೆ ವಿನಾಯ್ತಿ ನೀಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ಸರ್ಕಾರ ನಿರ್ಧರಿಸಿತು. ಸೌಜನ್ಯಕ್ಕಾದರೂ ಮುಖ್ಯಮಂತ್ರಿ ಚೌಹಾಣ್‌ ಅವರು ಗೃಹ ಇಲಾಖೆ  ಸಲಹೆ ಕೇಳಲಿಲ್ಲ’ ಎಂದರು.

‘ಒಂದು ವೇಳೆ ಅವರು ನನ್ನ ಸಲಹೆ ಕೇಳಿದ್ದರೆ, ಏನು ಮಾಡಬೇಕು ಎಂದು ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದೆ’ ಎಂದು ಗೌರ್‌ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.