ADVERTISEMENT

ಶಂಕರರಾಮನ್ ಕೊಲೆ ಪ್ರಕರಣ: ಎಲ್ಲ ಆರೋಪಿಗಳು ಖುಲಾಸೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2013, 6:57 IST
Last Updated 27 ನವೆಂಬರ್ 2013, 6:57 IST

ಚೆನ್ನೈ: ತಮಿಳುನಾಡಿನಲ್ಲಿ 2004ರಲ್ಲಿ  ನಡೆದ ಕಾಂಚೀಪುರಂ  ವರದರಾಜ ಪೆರುಮಾಳ್ ದೇವಸ್ಥಾನದ ವ್ಯವಸ್ಥಾಪಕರಾಗಿದ್ದ ಶಂಕರರಾಮನ್ ಅವರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 23 ಜನರನ್ನು ಬುಧವಾರ  ಪುದುಚೇರಿ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಕಂಚಿ ಕಾಮಕೋಟಿ ಪೀಠದ  ಹಿರಿಯ ಸ್ವಾಮೀಜಿ ಜಯೇಂದ್ರ ಸರಸ್ವತಿ  ಮತ್ತು  ಕಿರಿಯ ಸ್ವಾಮೀಜಿಯಾದ ವಿಜಯೇಂದ್ರ  ಅವರು  ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದರು.

ಸುದೀರ್ಘ  ಒಂಬತ್ತು  ವರ್ಷಗಳ ಕಾಲ ನಡೆದ ಈ ಪ್ರಕರಣದ ವಿಚಾರಣೆಯನ್ನು ಮಂಗಳವಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಎಸ್.ಮುರುಗನ್ ಪೂರ್ಣಗೊಳಿಸಿ, ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರು.

ಚೆಂಗಲ್‌ಪೇಟ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆಯನ್ನು ಜಯೇಂದ್ರ ಸ್ವಾಮೀಜಿಯವರ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದನ್ವಯ 2005ರಲ್ಲಿ ಪುದುಚೇರಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

2004ರ ಸೆ.3ರಂದು ವರದರಾಜ ಪೆರುಮಾಳ್ ದೇವಸ್ಥಾನದ ಆವರಣದಲ್ಲಿ ನಡೆದ ಈ ಕೊಲೆ ಪ್ರಕರಣದಲ್ಲಿ ದೇವಸ್ಥಾನದ ಮತ್ತೋರ್ವ ವ್ಯವಸ್ಥಾಪಕ ಸುಂದರೇಶನ್ ಮತ್ತು ಜಯೇಂದ್ರ ಸರಸ್ವತಿ ಅವರ ಸಹೋದರ ರಘು ಸೇರಿದಂತೆ ಒಟ್ಟು 24 ಜನರನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು.

24 ಜನ ಆರೋಪಿಗಳ ಪೈಕಿ ಒಬ್ಬನಾದ ಕಾಥಿರಾವನ್ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ ಕೆ.ಕೆ.ನಗರದಲ್ಲಿ ಹತ್ಯೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT