ADVERTISEMENT

ಶಬರಿಮಲೆ ತೀರ್ಥಯಾತ್ರೆ ಕೇಂದ್ರ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ಕೊಚ್ಚಿ (ಪಿಟಿಐ): ಶಬರಿಮಲೆ ಕ್ಷೇತ್ರವನ್ನು ರಾಷ್ಟ್ರೀಯ ತೀರ್ಥಯಾತ್ರೆ ಕೇಂದ್ರವಾಗಿ ಘೋಷಿಸಬೇಕು ಎಂಬ ಬೇಡಿಕೆ ಬಲವಾಗಿದೆ. ದಕ್ಷಿಣ ರಾಜ್ಯಗಳ ಶಬರಿಮಲೆ ಭಕ್ತರ ಸಂಘಟನೆಯೊಂದು ಈ ಬೇಡಿಕೆಯನ್ನು ಮುಂದಿಟ್ಟಿದೆ.

ವಾರ್ಷಿಕ ನಾಲ್ಕು ಕೋಟಿಗೂ ಹೆಚ್ಚು ಭಕ್ತರು ಬರುವ ಕ್ಷೇತ್ರದಲ್ಲಿ ಉತ್ತಮ ಸೌಲಭ್ಯಗಳು ಮತ್ತು ನೈರ್ಮಲ್ಯ ಇರಬೇಕು ಎಂದು ಈ ಸಂಘಟನೆ ಆಗ್ರಹಿಸಿದೆ.

ದೇಶದ ವಿವಿಧೆಡೆಯಿಂದ ಬರುತ್ತಿರುವ ತೀರ್ಥಯಾತ್ರಿಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿಯೂ  ಕ್ಷೇತ್ರದ ನಿರ್ವಹಣೆ ಮಾಡುತ್ತಿರುವ ತಿರುವಾಂಕೂರು ದೇವಸ್ಯಂ ಮಂಡಳಿ ಮತ್ತು ಕೇರಳ ಸರ್ಕಾರ ವಿಫಲವಾಗಿದೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಎಸ್‌ಎಎಸ್‌ಎಸ್‌) ಆರೋಪಿಸಿದೆ.

ಭಕ್ತರು ಕೊಳಕಾಗಿರುವ ಸ್ಥಳಗಳಲ್ಲಿಯೇ ಮಲಗುವುದು ಅನಿವಾರ್ಯ ಮತ್ತು ಹಿರಿಯ ಮಹಿಳೆಯರು ಮತ್ತು ಸಣ್ಣ ಮಕ್ಕಳಿಗೆ ಕೂಡ ಪ್ರತ್ಯೇಕ ಶೌಚಾಲಯಗಳು ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ ಎಂದು ಎಸ್‌ಎಎಸ್‌ಎಸ್‌ ಉಪಾಧ್ಯಕ್ಷ ಎಸ್‌. ಸುದರ್ಶನ್‌ ರೆಡ್ಡಿ ಮತ್ತು ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್‌ ಆರೋಪಿಸಿದ್ದಾರೆ.

ಇಲ್ಲಿನ ಅವ್ಯವಸ್ಥೆಯ ಬಗ್ಗೆ ಕೇರಳ ಮಾನವ ಹಕ್ಕುಗಳ ಆಯೋಗಕ್ಕೂ ಎಸ್‌ಎಎಸ್‌ಎಸ್‌ ದೂರು ಸಲ್ಲಿಸಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.