ADVERTISEMENT

ಶಶಿ ತರೂರ್‌ಗೆ ಕೇರಳ ‘ಕೈ’ ತಾಕೀತು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2014, 11:28 IST
Last Updated 6 ಅಕ್ಟೋಬರ್ 2014, 11:28 IST

ತಿರುವನಂತಪುರಂ (ಐಎಎನ್‌ಎಸ್‌): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೊಗಳುವುದನ್ನು ನಿಲ್ಲಿಸುವಂತೆ ಕೇರಳ ಕಾಂಗ್ರೆಸ್‌ ನಾಯಕರು ಸಂಸದ ಶಶಿ ತರೂರ್‌ ಅವರಿಗೆ ಒತ್ತಾಯ ಮಾಡಿದ್ದಾರೆ.

ತಿರುವನಂತಪುರ ಲೋಕಸಭಾ ಕೇಂದ್ರದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಪದೇ ಪದೇ ಮೋದಿ ಅವರನ್ನು ವಿನಾಕಾರಣ ಹೊಗಳುತ್ತಿದ್ದಾರೆ ಎಂದು ಕೇರಳ ಕಾಂಗ್ರೆಸ್‌ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಮೋದಿ ಸ್ವಚ್ಛಭಾರತ್‌ ಅಭಿಯಾನದ ಸಂದರ್ಭದಲ್ಲಿ ನೀಡಿದ್ದ ಸ್ವಚ್ಛತಾ ಆಹ್ವಾನದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ತರೂರ್‌, ‘ಪ್ರಧಾನ ಮಂತ್ರಿ ಮೋದಿ ಅವರು ಈ ಅಭಿಯಾನಕ್ಕೆ ನನಗೆ ಆಹ್ವಾನ ನೀಡಿರುವುದು ಹೆಮ್ಮೆ ಎನಿಸಿದೆ’ ಎಂದು ಟ್ವೀಟ್‌ ಮಾಡಿದ್ದರು.

ADVERTISEMENT

‘ಕೇವಲ ಅಕ್ಟೋಬರ್‌ 2ರ ವಿಷಯ ಮಾತ್ರವಲ್ಲ, ತರೂರ್‌ ಸಂದರ್ಭ ಸಿಕ್ಕಾಗಲೆಲ್ಲಾ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಇಷ್ಟು ಹೊಗಳುವಂಥ ಸಾಧನೆಯನ್ನೇನು ಮೋದಿ ಮಾಡಿದ್ದಾರೆ?’ ಎಂದು ಕೇರಳ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ಎಂ.ಎಂ.ಹಾಸನ್‌ ಪ್ರಶ್ನಿಸಿದ್ದಾರೆ.

‘ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪಕ್ಷ ಬೆಲೆ ಕೊಡುತ್ತದೆ. ಆದರೆ, ತರೂರ್‌ ಅವರ ‘ಮೋದಿ ಹೊಗಳಿಕೆ’ಯಿಂದ ಪಕ್ಷಕ್ಕೆ ಇರುಸುಮುರುಸಾಗುವುದನ್ನು ತಪ್ಪಿಸಲು ತರೂರ್‌ ಇದನ್ನು ಕೂಡಲೆ ನಿಲ್ಲಿಸಬೇಕು’ ಎಂದು ಕೇರಳ ಕಾಂಗ್ರೆಸ್‌ ಘಟಕದ ಮತ್ತೊಬ್ಬ ಉಪಾಧ್ಯಕ್ಷ ಸೂರ್ನಾದ್‌ ರಾಜಶೇಖರನ್‌ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.