ADVERTISEMENT

ಶಾಂತಿ ಮರುಸ್ಥಾಪನೆ ಯತ್ನ: ಕೇಂದ್ರಕ್ಕೆ ಹಿನ್ನಡೆ

ಕಾಶ್ಮೀರ: ರಾಜನಾಥ್ ಭೇಟಿಗೆ ವ್ಯಾಪಾರ ಸಂಘಟನೆಗಳ ನಕಾರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 19:30 IST
Last Updated 23 ಜುಲೈ 2016, 19:30 IST
ಕಾಶ್ಮೀರದ ಶ್ರೀನಗರದಲ್ಲಿ ಶನಿವಾರ ನಡೆದ ಸಂಘರ್ಷದ ವೇಳೆ ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಂಡು ಪ್ರತಿಭಟನಾಕಾರರು ಓಡಿದರು. – ಎಎಫ್‌ಪಿ ಚಿತ್ರ
ಕಾಶ್ಮೀರದ ಶ್ರೀನಗರದಲ್ಲಿ ಶನಿವಾರ ನಡೆದ ಸಂಘರ್ಷದ ವೇಳೆ ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಂಡು ಪ್ರತಿಭಟನಾಕಾರರು ಓಡಿದರು. – ಎಎಫ್‌ಪಿ ಚಿತ್ರ   

ಶ್ರೀನಗರ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಇಲ್ಲಿನ ಪ್ರಮುಖ ವ್ಯಾಪಾರ ಸಂಘಟನೆಗಳು ನಿರಾಕರಿಸಿವೆ. ಇದು ಕಣಿವೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ  ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ಆಗಿರುವ ಹಿನ್ನಡೆ ಎಂದು ಹೇಳಲಾಗುತ್ತಿದೆ.

ಸಚಿವ ರಾಜನಾಥ್ ಎರಡು ದಿನಗಳ ಭೇಟಿಗಾಗಿ ಶನಿವಾರ ಶ್ರೀನಗರಕ್ಕೆ ಬಂದರು. ಸಮಾಜದ ವಿವಿಧ ವರ್ಗಗಳ ಜೊತೆ ಮಾತುಕತೆ ನಡೆಸುವ ಉದ್ದೇಶ ಅವರದ್ದು. ಎರಡು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರ ಕೊನೆಗಾಣಿಸುವ ಉದ್ದೇಶದಿಂದ ರಾಜನಾಥ್ ಅವರು ಶನಿವಾರ ಸ್ಥಳೀಯ ನಾಯಕರು, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಪಾಲ್ಗೊಳ್ಳಲು ಮಾಧ್ಯಮ ಪ್ರತಿನಿಧಿಗಳಿಗೆ ಅನುಮತಿ ಇರಲಿಲ್ಲ.

ಪ್ರವಾಸೋದ್ಯಮದಲ್ಲಿ ಗುರುತಿಸಿಕೊಂಡಿರುವ ಕೆಲವು ಸ್ಥಳೀಯ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಸಚಿವರನ್ನು ‘ನೆಹರೂ ಅತಿಥಿ ಗೃಹ’ದಲ್ಲಿ ಭೇಟಿ ಮಾಡಿದರು. ಆದರೆ ಅವರು ಅತಿಥಿ ಗೃಹಕ್ಕೆ ತೆರಳುವ ವೇಳೆ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದ ಕಾರಣ ಅವರು ಯಾರೆಂಬುದು ಗೊತ್ತಾಗಲಿಲ್ಲ.
‘ಮೊದಲು ಹತ್ಯೆಗಳು ನಿಲ್ಲಲಿ. ನಂತರ ನಾವು ಗೃಹ ಸಚಿವರನ್ನು ಭೇಟಿಯಾಗುತ್ತೇವೆ’ ಎಂದು ಕಾಶ್ಮೀರ ವ್ಯಾಪಾರಿಗಳ ಮತ್ತು ತಯಾರಕರ ಒಕ್ಕೂಟದ ಮುಖ್ಯಸ್ಥ ಮೊಹಮ್ಮದ್ ಯಾಸಿನ್ ಖಾನ್ ಹೇಳಿದರು.

ಕೇಂದ್ರ ಅಹಂಕಾರದ ನಡೆ ಅನುಸರಿಸುತ್ತಿದೆ. ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೆ ತನ್ನದೇ ಆದ ನಿರ್ಧಾರವನ್ನು ಕೇಂದ್ರ ತೆಗೆದುಕೊಳ್ಳುತ್ತಿದೆ ಎಂದು ಕಾಶ್ಮೀರ ಆರ್ಥಿಕ ಒಕ್ಕೂಟ ಟೀಕಿಸಿದೆ.

ಕಣಿವೆ ರಾಜ್ಯದ ಹೋಟೆಲ್‌ ಒಕ್ಕೂಟಗಳು, ಸಾರಿಗೆ ಸಂಘಗಳು ಕೂಡ ಸಭೆಯನ್ನು ಬಹಿಷ್ಕರಿಸಿವೆ. ‘ಕೇಂದ್ರ ಸರ್ಕಾರವು ಇಲ್ಲಿ ಹತ್ಯೆಗಳನ್ನು ತಡೆಯಲು ವಿಫಲವಾಗಿದೆ. ಅಲ್ಲದೆ, ಜನರ ಕಳಕಳಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲೂ ಕೇಂದ್ರಕ್ಕೆ ಆಗಿಲ್ಲ’ ಎಂದು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ಜಿ.ಎ. ಮೀರ್ ಆರೋಪಿಸಿದರು.

‘ಕಣಿವೆ ರಾಜ್ಯದ ಅಶಾಂತಿ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದ ನಂತರ, ಕೇಂದ್ರ ಇಲ್ಲಿಗೆ ಸರ್ವ ಪಕ್ಷಗಳ ನಿಯೋಗ ಕಳುಹಿಸುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಸಾಕಾರಗೊಂಡಿಲ್ಲ. ಈಗಿರುವ ಪರಿಸ್ಥಿತಿ ತಿಳಿಗೊಳಿಸಲು ಕೇಂದ್ರಕ್ಕೆ ಆಸಕ್ತಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದು ಕಾಂಗ್ರೆಸ್ ಪ್ರಕಟಣೆ ಹೇಳಿದೆ.

ಕಾಶ್ಮೀರದ ಪ್ರಧಾನ ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್‌, ಗೃಹ ಸಚಿವರನ್ನು ಭೇಟಿ ಮಾಡಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಕರೆದಿದ್ದ ಸರ್ವಪಕ್ಷ ಸಭೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಬಹಿಷ್ಕರಿಸಿತ್ತು.

ರಾಜನಾಥ್ ಅವರು ರಾಜ್ಯಪಾಲ ಎನ್.ಎನ್. ವೋಹ್ರಾ, ಮೆಹಬೂಬಾ ಮತ್ತು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಭದ್ರತಾ ಪಡೆಗಳ ಹಾಗೂ ಗುಪ್ತದಳದ ಅಧಿಕಾರಿಗಳ ಜೊತೆ, ಸ್ಥಳೀಯ ಮುಖಂಡರು ಮತ್ತು ಮಾಧ್ಯಮ ಪ್ರತಿನಿಧಿಗಳ ಜೊತೆಗೂ ಮಾತುಕತೆ ನಡೆಸಲಿದ್ದಾರೆ.

ತಕ್ಕಮಟ್ಟಿಗೆ ಶಾಂತವಾಗಿರುವ ಪ್ರದೇಶಗಳಲ್ಲಿ ಕರ್ಫ್ಯೂ ಸಡಿಲಿಸುವಂತೆ ಸಚಿವರು ತಿಳಿಸಿದ್ದಾರೆ ಎಂದು ಗೊತ್ತಾಗಿದೆ. ಕಣಿವೆಯಲ್ಲಿ ಮೊಬೈಲ್‌ ಸೇವೆಗಳನ್ನು ಪುನರಾರಂಭಿಸುವುದರ ಪರ ಅವರು ಇದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಶನಿವಾರ ದೊಡ್ಡ ಪ್ರಮಾಣದಲ್ಲಿ ಗಲಾಟೆ ನಡೆದ ಬಗ್ಗೆ ವರದಿಯಾಗಿಲ್ಲವಾದರೂ, ಬಿಗುವಿನ ಪರಿಸ್ಥಿತಿ ಮುಂದುವರಿದಿದೆ. ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ, ಕಲ್ಲು ತೂರಾಟ ನಡೆದ ವರದಿಯಾಗಿದೆ. ಯುವಕರು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರು, ಅಶ್ರುವಾಯು ಸಿಡಿಸಿದ ಭದ್ರತಾ ಸಿಬ್ಬಂದಿ ಜೊತೆ ಘರ್ಷಣೆಗೆ ಇಳಿದಿದ್ದರು.

ಬದ್ಗಾಂ ಜಿಲ್ಲೆಯ ಚಡೂರಾದಲ್ಲಿ ಪ್ರತಿಭಟನಾಕಾರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದರು. ನಂತರ ಪೊಲೀಸರು ಅಶ್ರುವಾಯು ಸಿಡಿಸಿದರು, ಗಾಳಿಯಲ್ಲಿ ಗುಂಡು ಹಾರಿಸಿದರು.

ಕರ್ಫ್ಯೂ ಸಡಿಲಿಕೆ
ಶ್ರೀನಗರ (ಪಿಟಿಐ): ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಮತ್ತು ಶ್ರೀನಗರದ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ಹಿಂಪಡೆಯಲಾಗಿದೆ.

‘ಬಂಡಿಪೊರಾ, ಬಾರಾಮುಲ್ಲಾ, ಬದ್ಗಾಂ ಮತ್ತು ಗಂಡೆರ್ಬಾಲ್ ಜಿಲ್ಲೆಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಕಣಿವೆ ರಾಜ್ಯದ ಉಳಿದ ಪ್ರದೇಶಗಳಲ್ಲಿನ ಕರ್ಫ್ಯೂ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ಫ್ಯೂ ಹಿಂಪಡೆದಿರುವ ಪ್ರದೇಶಗಳಲ್ಲಿ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅನಂತನಾಗ್, ಕುಲ್ಗಾಂ, ಕುಪ್ವಾರ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಹಾಗೂ ಶ್ರೀನಗರದ ಎಂಟು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT