ADVERTISEMENT

ಶಾರದಾ ಹಗರಣ: ಸಿಬಿಐನಿಂದ ಚಾರ್ಜ್‌ಶೀಟ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 15:35 IST
Last Updated 23 ಅಕ್ಟೋಬರ್ 2014, 15:35 IST

ಕೋಲ್ಕತ್ತ (ಪಿಟಿಐ): ಬಹುಕೋಟಿ ಶಾರದಾ ಚಿಟ್‌ಫಂಡ್‌ ಹಗರಣ ಸಂಬಂಧ ಸಿಬಿಐ ಬುಧವಾರ ಮೊದಲ ಚಾರ್ಜ್‌ಶೀಟ್‌ ಸಲ್ಲಿಸಿದೆ. ಶಾರದಾ ಕಂಪೆನಿ ಮುಖ್ಯಸ್ಥ ಸುದೀಪ್ತ್ ಸೇನ್‌, ಅವರ ಆಪ್ತ ದೇಬ್ಜಾನಿ ಮುಖರ್ಜಿ ಹಾಗೂ ಟಿಎಂಸಿಯಿಂದ ಅಮಾನತುಗೊಂಡಿರುವ ಸಂಸದ ಕುನಾಲ್‌ ಘೋಷ್‌ ಅವರ ಹೆಸರುಗಳು ದೋಷಾರೋಪ ಪಟ್ಟಿಯಲ್ಲಿವೆ.

25 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಶಾರದಾ ಟೂರ್ಸ್‌ ಅಂಡ್‌ ಟ್ರಾವೆಲ್ಸ್‌, ಶಾರದಾ ಗಾರ್ಡನ್ಸ್‌, ಶಾರದಾ ರಿಯಾಲ್ಟಿ, ಶಾರದಾ ಕನ್‌ಸ್ಟ್ರಕ್ಷನ್ಸ್‌ ಹಾಗೂ ಸ್ಟ್ರಾಟೆಜಿಕ್‌ ಮೀಡಿಯಾ  ಈ ಐದೂ ಕಂಪೆನಿಗಳನ್ನೂ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

ಸಿಬಿಐನ ವಿಶೇಷ ಕ್ರೈಂ ಬ್ರ್ಯಾಂಚ್‌ನ ತನಿಖಾಧಿಕಾರಿ ಅವರು ತಮ್ಮ ವಕೀಲರೊಂದಿಗೆ ನಗರದ ಸೆಶನ್‌ ಕೋರ್ಟ್‌ನ ಮೆಟ್ರೋಪಾಲಿಟನ್‌  ಮ್ಯಾಜಿಸ್ಟ್ರೇಟ್‌ನಲ್ಲಿ ಚಾರ್ಜ್‌ಶೀಟ್‌ ದಾಖಲಿಸಿದ್ದಾರೆ.

ADVERTISEMENT

ಭಾರತೀಯ ದಂಡ ಸಂಹಿತೆಯ 120ಬಿ, 409 ಹಾಗೂ 420 ಕಲಂ ಸೇರಿದಂತೆ ಬಹುಮಾನ, ಚಿಟ್‌ ಹಾಗೂ ಲೇವಾದೇವಿ ಕಲಂಗಳಡಿ ದೋಷಾರೋಪ ದಾಖಲಿಸಲಾಗಿದೆ.ಭ್ರಷ್ಟಾಚಾರ ತಡೆಕಾಯ್ದೆಯ 173 (8) ಕಲಂ ಅಡಿಯಲ್ಲಿ ತನಿಖಾ ಸಂಸ್ಥೆ ತನಿಖೆಯನ್ನು ಮುಂದುವರಿಸಲಿದೆ ಎಂದೂ ಮೂಲಗಳು ಹೇಳಿವೆ.

ಶಾರದಾ ಹಗರಣದ ತನಿಖೆಗಾಗಿ ನೇಮಕಗೊಂಡಿರುವ ಶ್ಯಾಮಲ್ ಸೇನ್‌ ಸಮಿತಿ ವರದಿ ಸಲ್ಲಿಸಲು ಕೋರಿದ್ದ ಕಾಲಾವಕಾಶವನ್ನು ಕೋಲ್ಕತ್ತ ಹೈಕೋರ್ಟ್‌ ನಿರಾಕರಿಸಿದ ದಿನವೇ ಸಿಬಿಐ ಚಾರ್ಜ್‌ಶೀಟ್‌ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.