ADVERTISEMENT

ಶಿವಸೇನಾ ಟೀಕಾಪ್ರಹಾರ

ಅಕ್ರಮ ಮುಚ್ಚಿಹಾಕಲು ಎನ್‌ಸಿಪಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ತನ್ನ ಕಳಂಕಿತ ನಾಯಕರಿಗೆ ರಕ್ಷಣೆ ಸಿಗಲಿ ಎಂಬ ಒಂದೇ ಕಾರಣಕ್ಕಾಗಿ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷವು (ಎನ್‌ಸಿಪಿ) ಬಿಜೆಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಲು ಮುಂದಾಗಿದೆ ಎಂದು ಶಿವಸೇನಾ ಆಪಾದಿಸಿದೆ.

ಎನ್‌ಸಿಪಿ ನಿನ್ನೆ ಮೊನ್ನೆಯವರೆಗೂ ಬಿಜೆಪಿಯನ್ನು ಕೋಮುವಾದಿ, ಚಡ್ಡಿ ಪಕ್ಷ ಎಂದೆಲ್ಲಾ ಗೇಲಿ ಮಾಡಿತ್ತು. ಹಿಂದುತ್ವವನ್ನು ಅಣಕವಾಡಿತ್ತು. ಈಗ ಸ್ಥಿರತೆಯ ಹೆಸರಿನಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಆ ಪಕ್ಷ ಹೇಳುತ್ತಿದೆ. ಆದರೆ ನಿಜವಾಗಿಯೂ ಆ ಪಕ್ಷ ರಾಜ್ಯದ ಹಿತದೃಷ್ಟಿಯಿಂದ ಹೀಗೆ ಹೇಳುತ್ತಿಲ್ಲ. ತನ್ನ ಶಾಸಕರ ಅಕ್ರಮಗಳು ಬಯಲಿಗೆ ಬರಬಾರದು ಎಂದೇ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸೇನಾದ ಮುಖವಾಣಿ  ‘ಸಾಮ್ನಾ’ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ಎನ್‌ಸಿಪಿ ಪಕ್ಷಕ್ಕೆ ಪ್ರತಿಪಕ್ಷದ ನಾಯಕತ್ವವನ್ನು ಹೊಂದುವ ಅರ್ಹತೆಯೂ ಇಲ್ಲ. ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಎನ್‌ಸಿಪಿಯನ್ನು ‘ನ್ಯಾಚುರಲಿ ಕರಪ್ಟ್‌ ಪಾರ್ಟಿ (ಹುಟ್ಟಾ ಭ್ರಷ್ಟಾಚಾರದ ಪಕ್ಷ) ಎಂದು ಟೀಕಿಸಿದ್ದರು ಎಂಬುದನ್ನು ಪ್ರಸ್ತಾಪಿಸಿ ಚುಚ್ಚಲಾಗಿದೆ. ವಿದರ್ಭಾ­ದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ವ್ಯಕ್ತ­ವಾಗಿರುವುದನ್ನು ಜನರು ಮಹಾರಾಷ್ಟ್ರ ರಾಜ್ಯ ವಿಭಜನೆ ಪ್ರಸ್ತಾವವನ್ನು ಬೆಂಬ­ಲಿಸಿದ್ದಾರೆ ಎಂದು ಅರ್ಥೈಸಬಾರದು ಎಂದೂ ಶಿವಸೇನಾ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.