ADVERTISEMENT

ಶಿವಸೇನಾ ಸಂಸದನಿಗೆ ವಿಮಾನಯಾನ ನಿಷೇಧ

ಮ್ಯಾನೇಜರ್‌ಗೆ ಹಲ್ಲೆ: ಗಾಯಕ್‌ವಾಡ್‌ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:45 IST
Last Updated 24 ಮಾರ್ಚ್ 2017, 20:45 IST
ಶಿವಸೇನಾ ಸಂಸದನಿಗೆ ವಿಮಾನಯಾನ ನಿಷೇಧ
ಶಿವಸೇನಾ ಸಂಸದನಿಗೆ ವಿಮಾನಯಾನ ನಿಷೇಧ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮತ್ತು ಇತರ ಹಲವು ಖಾಸಗಿ ವಿಮಾನ ಯಾನ ಸಂಸ್ಥೆಗಳು ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್‌ ಅವರಿಗೆ ನಿಷೇಧ ಹೇರಿವೆ.

ಈ ಎಲ್ಲ ಸಂಸ್ಥೆಗಳು ರವೀಂದ್ರ ಅವರು ತಮ್ಮ ವಿಮಾನಗಳಲ್ಲಿ ಹಾರಾಟ ನಡೆಸುವುದನ್ನು ನಿಷೇಧಿಸಿವೆ. ಎರಡು ವಿಮಾನ ಸಂಸ್ಥೆಗಳು ರವೀಂದ್ರ ಅವರು ಖರೀದಿಸಿದ್ದ ಟಿಕೆಟನ್ನು ರದ್ದು ಮಾಡಿವೆ.

ಉಸ್ಮಾನಾಬಾದ್‌ ಸಂಸದ ರವೀಂದ್ರ ಅವರ ಮೇಲೆ ಮೊದಲು ನಿಷೇಧ ಹೇರಿದ್ದು ಏರ್‌ ಇಂಡಿಯಾ ಮತ್ತು ಭಾರತೀಯ ವಿಮಾನ ಯಾನ ಸಂಸ್ಥೆಗಳ ಒಕ್ಕೂಟ. ಒಕ್ಕೂಟದಲ್ಲಿ ಜೆಟ್‌ ಏರ್‌ವೇಸ್‌, ಇಂಡಿಗೊ, ಸ್ಪೈಸ್‌ಜೆಟ್‌ ಮತ್ತು ಗೋಏರ್‌ ಸದಸ್ಯತ್ವ ಹೊಂದಿವೆ. ಈ ನಿರ್ಧಾರವನ್ನು ವಿಸ್ತಾರ ಮತ್ತು ಏರ್‌ಏಷ್ಯಾ ಇಂಡಿಯಾ ಸಂಸ್ಥೆಗಳು ಕೂಡ ಬೆಂಬಲಿಸಿವೆ.

ಬ್ಯುಸಿನೆಸ್‌ ದರ್ಜೆ ಇಲ್ಲದ ವಿಮಾನದಲ್ಲಿ ತಮಗೆ ಬ್ಯುಸಿನೆಸ್‌ ದರ್ಜೆಯ ಆಸನ ನೀಡಿಲ್ಲ ಎಂಬ ಆಕ್ರೋಶದಲ್ಲಿ ಗುರುವಾರ ಏರ್‌ಇಂಡಿಯಾದ ವ್ಯವಸ್ಥಾಪಕರಿಗೆ ರವೀಂದ್ರ ಚಪ್ಪಲಿಯಲ್ಲಿ ಹೊಡೆದಿದ್ದರು. ಹಾಗಾಗಿ ರವೀಂದ್ರ ದೆಹಲಿಯಿಂದ ಪುಣೆಗೆ ಹಿಂದಿರುಗಲು ಕಾದಿರಿಸಿದ್ದ ಟಿಕೆಟನ್ನು ಏರ್‌ಇಂಡಿಯಾ ರದ್ದು ಮಾಡಿದೆ. ನಂತರ ಅವರು ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಇಂಡಿಗೊ ಸಂಸ್ಥೆಯಲ್ಲಿ ಟಿಕೆಟ್‌ ಕಾದಿರಿಸಿದರು. ಹಲ್ಲೆ ನಡೆಸಿದ ಸಂಸದನ ಹೆಸರಿನಲ್ಲಿಯೇ ಟಿಕೆಟ್‌ ಕಾರಿಸಿದ್ದು ಗಮನಕ್ಕೆ ಬಂದ ತಕ್ಷಣವೇ ಇಂಡಿಗೊ ಸಂಸ್ಥೆ ಕೂಡ ಟಿಕೆಟನ್ನು ರದ್ದು ಮಾಡಿತು.

ಸಚಿವರಿಗೆ ಪತ್ರ
ನಾಗರಿಕ ವಿಮಾನ ಯಾನ ಸಚಿವ ಅಶೋಕ್‌ ಗಜಪತಿ ರಾಜು ಅವರಿಗೆ ಏರ್‌ಇಂಡಿಯಾ ವಿಮಾನಗಳ ಪೈಲಟ್‌ಗಳ ಸಂಘ ಪತ್ರ ಬರೆದಿದೆ. ರವೀಂದ್ರ ಅವರು ಕ್ಷಮೆ ಕೇಳದೇ ಇದ್ದರೆ ಅವರು ಪ್ರಯಾಣಿಸುವ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಪ್ರಕರಣ ದಾಖಲು: ರವೀಂದ್ರ ಗಾಯಕ್‌ವಾಡ್‌ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಉದ್ದೇಶಪೂರ್ವಕವಲ್ಲದ ಹತ್ಯೆ ಯತ್ನ (ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 308) ಮತ್ತು ಹಲ್ಲೆ (ಸೆಕ್ಷನ್‌ 355) ಪ್ರಕರಣ
ದಾಖಲಿಸಲಾಗಿದೆ.

ರೈಲಿನಲ್ಲಿ ವಾಪಸ್
ಭಾರತದ ಎಲ್ಲ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದ್ದರಿಂದಾಗಿ ರವೀಂದ್ರ ಅವರು ದೆಹಲಿಯಿಂದ ಮುಂಬೈಗೆ ಶುಕ್ರವಾರ ರೈಲಿನಲ್ಲಿ ಮರಳಿದ್ದಾರೆ.

ಪ್ರಯಾಣಿಕರ ಸುರಕ್ಷತೆಯ ಕಾರಣಕ್ಕಾಗಿ ರವೀಂದ್ರ ಅವರು ಭಾರತದ ಯಾವುದೇ ವಿಮಾನಗಳಲ್ಲಿ ಪ್ರಯಾಣಿ ಸುವಂತಿಲ್ಲ.  ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.
ಜಿ.ಪಿ.ರಾವ್‌
ಏರ್‌ಇಂಡಿಯಾ ವಕ್ತಾರ

ನಾನು ಕ್ಷಮೆ ಕೇಳುವುದಿಲ್ಲ. ಮೊದಲು ಆತ ಕ್ಷಮೆ ಕೇಳಲಿ. ನಂತರ ನೋಡೋಣ.  ಇತರರೊಂದಿಗೆ ಹೇಗೆ ವರ್ತಿಸಬೇಕು ಎಂಬುದು 60 ವರ್ಷದ ವ್ಯಕ್ತಿಗೆ ಗೊತ್ತಿರಬೇಕು
ರವೀಂದ್ರ ಗಾಯಕ್‌ವಾಡ್‌,
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.