ADVERTISEMENT

ಶಿವಸೇನೆ– ಬಿಜೆಪಿ ನಡುವೆ ತಿಕ್ಕಾಟ

ಮಹಾರಾಷ್ಟ್ರ: ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನ ವಿವಾದ

​ಪ್ರಜಾವಾಣಿ ವಾರ್ತೆ
Published 2 ಜೂನ್ 2014, 19:30 IST
Last Updated 2 ಜೂನ್ 2014, 19:30 IST

ಮುಂಬೈ(ಪಿಟಿಐ): ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳಷ್ಟೇ ಉಳಿದಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಈಗಲೇ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಜಟಾಪಟಿ ಆರಂಭವಾಗಿದೆ.

ಕೇಂದ್ರ ಸಚಿವ ಹಾಗೂ ಮಹಾ­ರಾಷ್ಟ್ರದ ಬಿಜೆಪಿ ಮುಖಂಡ ಗೋಪಿ­ನಾಥ ಮುಂಡೆ ಅವರನ್ನು ಮಹಾ­ರಾಷ್ಟ್ರದ ಮುಖ್ಯಮಂತ್ರಿ ಅಭ್ಯರ್ಥಿ ಎಂದು  ಬಿಜೆಪಿ  ಬಿಂಬಿಸಿರುವುದಕ್ಕೆ ಶಿವಸೇನೆ ಆಕ್ಷೇಪ ವ್ಯಕ್ತಪಡಿಸಿದೆ. ಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಈ ಸಂಬಂಧ ಸಂಪಾದಕೀಯ ಪ್ರಕಟವಾಗಿದೆ.

ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಶಿವಸೇನೆ ಸೋಮವಾರ ಘೋಷಿಸಿದೆ.

‘ಬಿಜೆಪಿ ಜತೆ ನಮಗೆ ಉತ್ತಮ ಸಂಬಂಧ ಇದೆ. ಬಿಜೆಪಿಗೆ ಪ್ರಧಾನಿ ಸ್ಥಾನ ಮತ್ತು  ಶಿವಸೇನೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನ ಎಂಬುದು ನಮ್ಮ ನಡುವಿನ ತಿಳಿವಳಿಕೆಯಾಗಿದೆ. ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಉದ್ಧವ್‌ ಅವರೇ ಮುಖ್ಯಮಂತ್ರಿ­ಯಾಗಲಿ­ದ್ದಾರೆ’ ಎಂದು ಸೇನಾ ವಕ್ತಾರ ಸಂಜಯ್‌ ರಾವತ್‌ ಹೇಳಿದ್ದಾರೆ.

‘ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಉದ್ಧವ್‌ ಎಲ್ಲೂ ಹೇಳಿಲ್ಲ. ಆದರೆ ಅವರು ಮುಖ್ಯಮಂತ್ರಿ­ಯಾಗ­ಬೇಕು ಎಂಬುದು ನಮ್ಮೆಲ್ಲರ ಆಸೆ’ ಎಂದು ವಿವರಿಸಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಶಿವಸೇನೆ ಹೇಳಿದೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ  ರಾಜ್ಯದ 48 ಲೋಕಸಭಾ ಸ್ಥಾನಗಳಲ್ಲಿ 42ರಲ್ಲಿ ಜಯಗಳಿಸಿದ್ದವು. 

‘ಮುಂಡೆ ಅವರನ್ನು ರಾಜ್ಯ ಬಿಜೆಪಿ ಕೇಂದ್ರಕ್ಕೆ ಸಾಲವಾಗಿ ಕಳುಹಿಸಿಕೊಟ್ಟಿದೆ. ಮೂರು ತಿಂಗಳ ಬಳಿಕ ಅವರು ಬಡ್ಡಿಯೊಂದಿಗೆ ಮಹಾರಾಷ್ಟ್ರ ರಾಜಕಾರಣಕ್ಕೆ ಮರಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್‌ ಹೇಳಿದ್ದಾರೆ’ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಹಾರಾಷ್ಟ್ರ ನವನಿರ್ಮಾಣ  ಸೇನೆ ಮುಖ್ಯಸ್ಥ ಮತ್ತು ಉದ್ಧವ್‌ ಸೋದರ ಸಂಬಂಧಿ ರಾಜ್‌ ಠಾಕ್ರೆ ಇತ್ತೀಚೆಗೆ ಹೇಳಿದ್ದರು.

ಪಕ್ಷ ಗೆದ್ದರೆ ತಾವೇ ಮುಖ್ಯಮಂತ್ರಿ ಎಂದೂ ಅವರು ತಿಳಿಸಿದ್ದರು. ಈ ತನಕ ಠಾಕ್ರೆ ಕುಟುಂಬಕ್ಕೆ ಸೇರಿದ ಯಾರೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ರಾಜ್‌ ಹೇಳಿಕೆಯ ನಂತರ ಶಿವಸೇನೆಯೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.