ADVERTISEMENT

ಶಿವಸೇನೆ ಒತ್ತಡಕ್ಕೆ ಮಣಿಯದ ಬಿಜೆಪಿ

ವಿಶ್ವಾಸಮತದ ನಂತರ ಸೇನೆಗೆ ಸಂಪುಟದಲ್ಲಿ ಸ್ಥಾನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2014, 19:30 IST
Last Updated 5 ನವೆಂಬರ್ 2014, 19:30 IST

ಮುಂಬೈ (ಪಿಟಿಐ): ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸಿದ ನಂತರ ಶಿವಸೇನೆಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಆಲೋಚಿಸಲಾಗುವುದು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶಿವಸೇನೆಯ ಒತ್ತಡ ತಂತ್ರಕ್ಕೆ ಬಿಜೆಪಿ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

‘ಪಹೆಲೆ ವಿಶ್ವಾಸ್‌ ಫಿರ್ ವಿಸ್ತಾರ್’ (ಮೊದಲಿಗೆ ವಿಶ್ವಾಸಮತ ನಂತರ ಸಂಪುಟ ವಿಸ್ತರಣೆ) ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ತಿಂಗಳ 12ರಂದು ವಿಶ್ವಾಸ ಮತ ಯಾಚಿಸುವ ಮೊದಲೇ ಶಿವಸೇನೆಯ ಶಾಸಕ­ರನ್ನು ಸಂಪುಟಕ್ಕೆ ಸೇರಿಸಿಕೊಳ್ಳು­ತ್ತೀರಾ ಎಂದು ಕೇಳಿದಾಗ ಮೇಲಿ­ನಂತೆ ಹೇಳುವ ಮೂಲಕ ಮಾಜಿ ಮಿತ್ರ ಪಕ್ಷದ ಜತೆಗಿನ ಭಿನ್ನಾ­ಭಿ­ಪ್ರಾಯ ಬಗೆಹ­ರಿದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಶಿವಸೇನೆ­ಯನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳುವ ನಿರ್ಧಾರವನ್ನು ದೆಹಲಿಯಲ್ಲಿ ಸೂಕ್ತ ಸಂದರ್ಭದಲ್ಲಿ ತೆಗೆದುಕೊಳ್ಳ­ಲಾಗುತ್ತದೆ ಎಂದಿದ್ದಾರೆ.

ಕೇಂದ್ರ ಸಚಿವ ಅರುಣ್‌ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ಶಿವಸೇನೆಯ ಸಂಧಾನಕಾರರ ಜತೆ ಮಾತು­ಕತೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಮಧ್ಯೆ ಫಡ್ನವೀಸ್ ಅವರ ಹೇಳಿಕೆಯಿಂದ ಅಸಮಾ ಧಾನಗೊಂಡಿರುವ ಸೇನೆಯ ಸಂಸದ­ರೊಬ್ಬರು, ‘ತಮ್ಮ ಪಕ್ಷವನ್ನು ಗೌರವಯುತವಾಗಿ ಸರ್ಕಾರಕ್ಕೆ ಸೇರಿಸಿಕೊಳ್ಳದಿದ್ದರೆ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಶಾಸಕರ ಸಭೆಯನ್ನು ಭಾನುವಾರ ಕರೆದಿದ್ದು, ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.