ADVERTISEMENT

ಶೇ 48ರಷ್ಟು ಭಾರತೀಯರ ಬಳಿಯಷ್ಟೇ ಬ್ಯಾಂಕ್‌ ಖಾತೆ!

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2014, 10:04 IST
Last Updated 2 ಡಿಸೆಂಬರ್ 2014, 10:04 IST

ನವದೆಹಲಿ (ಪಿಟಿಐ): ಭಾರತದಲ್ಲಿ ಶೇಕಡ 48ರಷ್ಟು ವಯಸ್ಕರ ಬಳಿ ಮಾತ್ರವೇ ಬ್ಯಾಂಕ್‌ ಖಾತೆಗಳಿವೆ. ಅದರಲ್ಲಿ ಸುಮಾರು  ಅರ್ಧದಷ್ಟು ನಿಷ್ಕ್ರಿಯವಾಗಿವೆ ಎಂದು ವರದಿಯೊಂದು ಬೆಳಕು ಚೆಲ್ಲಿದೆ.

ಕೀನ್ಯಾ, ತೆಂಜಾನಿಯ, ಉಗಾಂಡ, ನೈಜೀರಿಯಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕಿಂತಲೂ ನಿಷ್ಕ್ರಿಯಗೊಂಡಿರುವ ಬ್ಯಾಂಕ್‌ ಖಾತೆಗಳ ಸಂಖ್ಯೆ ಭಾರತದಲ್ಲಿ ಅಧಿಕವಾಗಿದೆ ಎಂದು ದೇಶವ್ಯಾಪಿ  ಆರ್ಥಿಕ ಚಟುವಟಿಕೆಗಳ ಕುರಿತು ನಡೆಸಲಾದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಬಹುತೇಕ ಭಾರತೀಯರು  ಆರ್ಥಿಕ ಸಂಸ್ಥೆಗಳ ಬದಲಾಗಿ ಕುಟುಂಬ ಹಾಗೂ ಸ್ನೇಹಿತರಿಂದ ಹಣವನ್ನು ಸಾಲವಾಗಿ ಪಡೆಯುತ್ತಾರೆ ಎಂದು ಬಿಲ್ ಹಾಗೂ ಮೆಲಿಂದಾ ಗೇಟ್ಸ್‌ ಫೌಂಡೇಷನ್‌ ನೆರವಿನಿಂದ ನಡೆಸಲಾದ ಸಮೀಕ್ಷೆ ಹೇಳಿದೆ.

ADVERTISEMENT

‘ಭಾರತದಲ್ಲಿ ಶೇಕಡ 48ರಷ್ಟು  ವಯಸ್ಕರು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲಿ ಶೇಕಡ 47 ರಷ್ಟು ಬ್ಯಾಂಕ್‌ ಖಾತೆಗಳು ನಿಷ್ಕ್ರಿಯವಾಗಿವೆ. ಖಾತೆದಾರರ ಪೈಕಿ ಶೇಕಡ 25ಕ್ಕೂ ಕಡಿಮೆ ಜನರು ಅತ್ಯಾಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಾರೆ. ಮೊಬೈಲ್‌ ಹಣಕಾಸು ಸೇವೆ ಬಳಸುವವರ ಸಂಖ್ಯೆ ಶೇಕಡ 0.3ರಷ್ಟಿದೆ’ ಎಂದೂ ಸಮೀಕ್ಷೆ ಹೇಳಿದೆ.

ಅಲ್ಲದೇ, ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಬಳಸುವವರಲ್ಲಿ ಲಿಂಗ ಅಸಮಾನತೆಯೂ ವ್ಯಾಪಕವಾಗಿ ಅಂದರೆ ಶೇ 17ರಷ್ಟಿದೆ. ಅತಿಹೆಚ್ಚು ಲಿಂಗ ಅಸಮಾನತೆ ಪಾಕಿಸ್ತಾನ ಕಂಡು ಬಂದಿದೆ ಎನ್ನುತ್ತದೆ ಸಮೀಕ್ಷೆ.

‘ಆರ್ಥಿಕ ಸಮಗ್ರತೆ ಎಂಬುದು ಕೇವಲ ಬ್ಯಾಂಕ್‌ ಖಾತೆ ತೆರೆಯುವುದಕಷ್ಟೇ ಸೀಮಿತವಾಗಿದೆ ಎಂಬುದನ್ನು ವರದಿ ಸೂಚಿಸುತ್ತಿದೆ’ ಎನ್ನುತ್ತಾರೆ ಬಿಲ್ ಹಾಗೂ ಮೆಲಿಂದಾ ಗೇಟ್ಸ್ ಫೌಂಡೇಷನ್‌ನ ಭಾರತೀಯ ವಿಭಾಗದ ನಿರ್ದೇಶಕ ಗಿರಿಂದ್ರೆ ಬಿಹಾರಿ.

ಈ ಸಮೀಕ್ಷೆಯಲ್ಲಿ 15 ವರ್ಷಕ್ಕೂ ಮೇಲ್ಪಟ್ಟ 45,024 ಭಾರತೀಯರನ್ನು ಸಂದರ್ಶಿಸಲಾಗಿತ್ತು. ಈ ವೇಳೆ  ಅವರು ಬಳಸುವ ಸಾಂಪ್ರದಾಯಿಕ ಆರ್ಥಿಕ ಸೇವೆಗಳು, ಮೊಬೈಲ್‌ ಸಾಧನಗಳು ಹಾಗೂ ಮೊಬೈಲ್‌ ಆರ್ಥಿಕ ಸೇವೆಗಳಂಥಹ ಸೌಲಭ್ಯಗಳ ಮೌಲ್ಯಮಾಪನ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.