ADVERTISEMENT

ಷಾ ವಿರುದ್ಧ ಆರೋಪಪಟ್ಟಿ ದೋಷಯುಕ್ತ: ಕೋರ್ಟ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2014, 19:30 IST
Last Updated 11 ಸೆಪ್ಟೆಂಬರ್ 2014, 19:30 IST

ಮುಜಫ್ಫರ್‌ನಗರ (ಪಿಟಿಐ): ಲೋಕಸಭಾ ಚುನುವಾಣೆಯಲ್ಲಿ ದ್ವೇಷ ಬಿತ್ತುವಂತಹ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ದೋಷವಿರುವ ಕಾರಣ ಅದನ್ನು  ಒಪ್ಪಿಕೊಳ್ಳಲು ಕೋರ್ಟ್‌ ಗುರುವಾರ ನಿರಾಕರಿಸಿದೆ.

ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್‌ ನ್ಯಾಯಾಧೀಶ ಸುಂದರ್‌ ಲಾಲ್‌ ಅವರು, ‘ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸುವಾಗ ನಿಯಮ ಪಾಲನೆ ಮಾಡಿಲ್ಲ. ಆದ್ದರಿಂದ ಈ ಆರೋಪ ಪಟ್ಟಿಯನ್ನು ವಿಚಾರಣೆಗೆ ಪರಿಗಣಿಸಲಾಗದು’ ಎಂದಿದ್ದಾರೆ.

‘ಆರೋಪಪಟ್ಟಿ ಸಲ್ಲಿಕೆ ಮಾಡುವುದಕ್ಕೂ ಮುನ್ನ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 173(2) ಕಲಂ ಅನ್ವಯ ಆರೋಪಿಯನ್ನು ಬಂಧಿಸಲು ಪೊಲೀಸರು ಪ್ರಯತ್ನ ನಡೆಸಿಲ್ಲ. ಜೊತೆಗೆ, ಆರೋಪಿ ವಿರುದ್ಧ ವಾರಂಟ್‌ ಅಥವಾ ಜಪ್ತಿ ಪ್ರಕ್ರಿಯೆಗೆ ಅಗತ್ಯ ಅನುಮತಿಯನ್ನೂ ಕೋರಿಲ್ಲ’ ಎಂದಿರುವ ನ್ಯಾಯಾಧೀಶರು, ಆರೋಪ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ.

ಷಾ ವಿರುದ್ಧ ಪೊಲೀಸರು ಬುಧವಾರ ಆರೋಪಪಟ್ಟಿ ಸಲ್ಲಿಸಿದ್ದರು. ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ರ್‍ಯಾಲಿಯೊಂದರಲ್ಲಿ  ‘ಅವಮಾನಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಿ’ ಎಂದು ಹೇಳಿದ್ದರು. ಧರ್ಮದ ಆಧಾರದ ಮೇಲೆ ಮತಯಾಚಿಸದ್ದಕ್ಕೆ ಷಾ ವಿರುದ್ಧ ದೂರು ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.