ADVERTISEMENT

ಸಂಕಷ್ಟದಲ್ಲಿ ಈಶಾನ್ಯ ಭಾರತದ 5 ಲಕ್ಷ ಮಂದಿ

ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಉಲ್ಬಣ, ಜನ ತತ್ತರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 19:30 IST
Last Updated 23 ಜುಲೈ 2016, 19:30 IST
ಪ್ರವಾಹಪೀಡಿತ ಅಸ್ಸಾಂನ ಬಾಲಿಮುಖ್ ಗ್ರಾಮಸ್ಥರು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಶನಿವಾರ ತೆರಳಿದರು –ಪಿಟಿಐ ಚಿತ್ರ
ಪ್ರವಾಹಪೀಡಿತ ಅಸ್ಸಾಂನ ಬಾಲಿಮುಖ್ ಗ್ರಾಮಸ್ಥರು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಶನಿವಾರ ತೆರಳಿದರು –ಪಿಟಿಐ ಚಿತ್ರ   

ಗುವಾಹಟಿ: ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾರಿ ಪ್ರವಾಹದಿಂದ ಸುಮಾರು ಐದು ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.

ಅಸ್ಸಾಂನಲ್ಲಿ ಶನಿವಾರ ಪ್ರವಾಹಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ  ಮತ್ತು ಎಸ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಸಂಕಷ್ಟಕ್ಕೆ ಸಿಲುಕಿದ್ದವರನ್ನು ಸುರಕ್ಷಿತ ಪ್ರದೇಶಗಳಿಗೆ  ಕಳುಹಿಸುತ್ತಿದ್ದಾರೆ.

ಶನಿವಾರ ಸಂಜೆಯವರೆಗೆ ಅಸ್ಸಾಂನ 1039 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಯಿದ್ದು, ಸುಮಾರು 50 ಸಾವಿರ ಹೆಕ್ಟೇರ್‌ಗಳಷ್ಟು ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ ಎಂದು ಅಸ್ಸಾಂ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ವಿವಿಧ ಜಿಲ್ಲೆಗಳಲ್ಲಿ 75 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 21 ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ ಎಂದಿದೆ.
ಗೋಡೆ ಕುಸಿದು 3 ಸಾವು (ಡೆಹ್ರಾಡೂನ್ ವರದಿ):ಉತ್ತರಾಖಂಡ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ  ಮೂವರು ಜೀವಂತವಾಗಿ ಸಮಾಧಿಯಾಗಿರುವ ಘಟನೆ ತೆಹ್ರಿ  ಜಿಲ್ಲೆಯಲ್ಲಿ ನಡೆದಿದೆ.

ತೆಹ್ರಿಯ ಘಾನ್ಸಾಲಿ ಪ್ರದೇಶದ ಪುರ್ವಾಲಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ  ಸುಮಾರು 4 ಗಂಟೆಗೆ ಈ ಅವಘಡ ಸಂಭವಿಸಿದ್ದು, ಮನೆಯಲ್ಲಿ ನಿದ್ರಿಸುತ್ತಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು  ಮೃತಪಟ್ಟಿದ್ದಾರೆ.

ಇಟಾನಗರ ವರದಿ (ಪಿಟಿಐ): ಶನಿವಾರ   ಧಾರಾಕಾರ ಮಳೆ ಸುರಿದ ಕಾರಣ ಅರುಣಾಚಲ ಪ್ರದೇಶದ ನದಿಗಳು ಉಕ್ಕಿ ಹರಿದಿದ್ದು, ಕೆಲ ಸ್ಥಳಗಳಲ್ಲಿ ಪ್ರವಾಹ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.