ADVERTISEMENT

ಸಂಸತ್ತಿನಲ್ಲಿ ಹೇಳಿಕೆಗೆ ಪ್ರತಿಪಕ್ಷ ಪಟ್ಟು

ಸಚಿವ ಗಡ್ಕರಿ ಮನೆಯಲ್ಲಿ ‘ಕದ್ದಾಲಿಕೆ ಸಾಧನ’ ಪತ್ತೆ?

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ನವದೆಹಲಿ (ಪಿಟಿಐ): ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಮನೆಯಲ್ಲಿ ‘ಕದ್ದಾಲಿಕೆ ಸಾಧನ’ ಪತ್ತೆಯಾಗಿದೆ ಎನ್ನುವ ವರದಿಗೆ ಸಂಬಂಧಿಸಿ ಸಂಸತ್‌­ನಲ್ಲಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷ­ಗಳು ಸರ್ಕಾರವನ್ನು ಒತ್ತಾಯಿಸಿವೆ.

ಇದು ಊಹಾಪೋಹದ ವರದಿ ಎಂದು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸ್ಪಷ್ಟನೆ ನೀಡಿದ್ದರೂ ಕಾಂಗ್ರೆಸ್‌್ ಹಾಗೂ ಇನ್ನಿತರ ವಿರೋಧ ಪಕ್ಷಗಳು  ಸರ್ಕಾರದ ಹೇಳಿಕೆಗೆ ಪಟ್ಟು ಹಿಡಿದಿವೆ.

ತನಿಖೆಗೆ ಆಗ್ರಹ: ‘ಇದೊಂದು ಗಂಭೀರ ವಿಷಯ. ತನಿಖೆಗೆ ಒಳಪಡಿಸಬೇಕು’ ಎಂದು ಕಾಂಗ್ರೆಸ್‌್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಒತ್ತಾಯಿಸಿದ್ದಾರೆ.

‘ಸಂಪುಟದ ಪ್ರಮುಖ ವ್ಯಕ್ತಿಯ ಭದ್ರತೆಯ ಬಗ್ಗೆ ಇದು ಆತಂಕ  ಮೂಡಿ­ಸಿದೆ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಸಾಮಾನ್ಯ ಜನರನ್ನು ದೇವರೇ ಕಾಪಾಡಬೇಕು’ ಎಂದು  ಹೇಳಿದ್ದಾರೆ.

ಅಮೆರಿಕದ ಮೇಲೆ ಸಂಶಯ: ಈ ಪ್ರಕರ­ಣದ ಹಿಂದೆ ಅಮೆರಿಕದ ಚಿತಾ­ವಣೆ ಇದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಸುಬ್ರ­ಮಣಿಯಂ ಸ್ವಾಮಿ, ‘ಬಿಜೆ­ಪಿಯಂಥ ರಾಷ್ಟ್ರೀಯ­ವಾದಿ ಪಕ್ಷ­ಗಳು ಅಧಿಕಾರಕ್ಕೆ ಬರು­ವುದು ಅಮೆರಿ­ಕಕ್ಕೆ ಬೇಕಿರ­ಲಿಲ್ಲ’ ಎಂದಿದ್ದಾರೆ.

‘ಗಡ್ಕರಿ ಈ ವರದಿಯನ್ನು ಅಲ್ಲಗಳೆ­ದಿದ್ದಾರೆ. ಆದರೂ ಈ ಬಗ್ಗೆ ಇತರರು ಹೇಳಿಕೆ ನೀಡುವುದು ಸೂಕ್ತವಲ್ಲ’ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್‌್ ರಿಜಿಜು ಹೇಳಿದ್ದಾರೆ.

ಕದ್ದಾಲಿಕೆಯಂಥ ಪ್ರಕರಣ­ಗಳಿಂದ  ರಕ್ಷಿಸಿ­­ಕೊಳ್ಳುವುದಕ್ಕೆ ಕಾನೂನಿನಲ್ಲಿ ಇರುವ ಅವಕಾಶಗಳ ಬಗ್ಗೆ ಸರ್ಕಾರ ಜನರಿಗೆ ಮನವರಿಕೆ ಮಾಡಿ­ಕೊಡಬೇಕು ಎಂದು ಕಾಂಗ್ರೆಸ್‌ ಮುಖಂಡ   ಮನಿಷ್‌ ತಿವಾರಿ ಹೇಳಿದ್ದಾರೆ.

ಇದನ್ನು ವಿಸ್ತೃತ ತನಿಖೆಗೆ ಒಳಪಡಿ­ಸ­ಬೇಕು ಎಂದು ಮಾಜಿ ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರು ಭಾನುವಾರ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಎನ್‌ಸಿಪಿ ಮುಖಂಡ ತಾರೀಕ್‌್ ಅನ್ವರ್‌, ‘ಕದ್ದಾಲಿಕೆಯನ್ನು ರುಜುವಾತು­ಪಡಿ­ಸಲು ಸರ್ಕಾರ ಸದನದಲ್ಲಿ ಹೇಳಿಕೆ ಕೊಡ­­ಬೇಕು. ಈ ಪ್ರಕರಣದಲ್ಲಿ ಪ್ರಧಾನಿ ಕಚೇರಿ ಅಥವಾ   ಹೊರಗಿ­ನವರು ಶಾಮೀ­­ಲಾಗಿ­ದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಪಡೆಯು ಬಿಜೆಪಿ ಮೇಲೆ ಗುಟ್ಟಾಗಿ ನಿಗಾ ಇಡುತ್ತಿರುವ ಬಗ್ಗೆ ಏನಾದರೂ ಮಾಹಿತಿ ಇದೆಯೇ ಎನ್ನುವ ಪ್ರಶ್ನೆಗೆ, ‘ ಅಮೆರಿಕವು ಬಿಜೆಪಿ ಜತೆ ಉತ್ತಮ ಸಂಬಂಧ ಹೊಂದಿದೆ’ ಎಂದು ವಿದೇ­ಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವ ಸಲ್ಮಾನ್‌್ ಖುರ್ಷಿದ್‌್ ಪ್ರತಿಕ್ರಿಯಿಸಿದ್ದಾರೆ.

‘ಇದರಲ್ಲಿ ಬೇರೆಯವರ ಕೈವಾಡ ಇರುವ ಶಂಕೆ ಇದ್ದಲ್ಲಿ ಬಿಜೆಪಿ ಅದನ್ನು ತನಿಖೆಗೆ ಒಳಪಡಿಸಬೇಕು’ ಎಂದೂ ಅವರು ಹೇಳಿದ್ದಾರೆ.
13, ತೀನ್‌್ ಮೂರ್ತಿ ಲೇನ್‌ನಲ್ಲಿರುವ ಗಡ್ಕರಿ ನಿವಾಸದ ಮಲಗುವ ಕೋಣೆ­ಯಲ್ಲಿ ಅತ್ಯಾಧುನಿಕ ಆಲಿಕೆ ಸಾಧನ ಪತ್ತೆಯಾಗಿದೆ ಎಂದು ಮಾಧ್ಯಮ­ಗಳು ವರದಿ ಮಾಡಿದ್ದವು.

ಪ್ರತಿಕ್ರಿಯೆಗೆ ನಕಾರ: ಗೃಹ ಸಚಿವ ರಾಜ­ನಾಥ್‌ ಸಿಂಗ್‌ ಅವರು ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ‘ಗಡ್ಕರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ನಾವು ಹೇಳಬೇಕಾಗಿರು­ವುದು ಇನ್ನೇನೂ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಶಕ್ತಿಸಿನ್ಹ್‌ ಗೋಹಿಲ್‌ ಆಗ್ರಹ
ಮೋದಿ ಹಾಗೂ ಅಮಿತ್‌ ಷಾ ಅವರ ಆಣತಿ ಮೇರೆಗೆ ನಡೆದಿದೆ ಎನ್ನಲಾದ ಯುವತಿ ಮೇಲಿನ ಅಕ್ರಮ ನಿಗಾ ಪ್ರಕರಣ ಉಲ್ಲೇಖಿಸಿ ಗುಜರಾತ್‌  ಕಾಂಗ್ರೆಸ್‌ ನಾಯಕ ಶಕ್ತಿಸಿನ್ಹ್‌ ಗೋಹಿಲ್‌, ಗಡ್ಕರಿ ನಿವಾಸದಲ್ಲಿ ಕದ್ದಾಲಿಕೆ ಉಪಕರಣ ಪತ್ತೆಯಾಗಿರುವ ಕುರಿತು ಸರ್ಕಾರ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

‘ನಾನು ಗುಜರಾತ್‌ನಿಂದ ಬಂದಿದ್ದೇನೆ. ಅದು ಬೇಹುಗಾರಿಕೆಗೆ ಹೆಸರುವಾಸಿಯಾದ ಸ್ಥಳ. ಬೇಹುಗಾರಿಕೆಯ ಸೂತ್ರಧಾರರೇ ದೆಹಲಿಗೆ ಬಂದಂತಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT