ADVERTISEMENT

ಸಚಿವ ಸ್ಥಾನಕ್ಕೆ ಲಾಬಿ ಬೇಡ

ರಾಜ್ಯದ ಸಂಸದರಿಗೆ ಮೋದಿ ಖಡಕ್‌ ನುಡಿ

​ಪ್ರಜಾವಾಣಿ ವಾರ್ತೆ
Published 20 ಮೇ 2014, 19:30 IST
Last Updated 20 ಮೇ 2014, 19:30 IST

ನವದೆಹಲಿ: ಸಚಿವ ಸ್ಥಾನಗಳಿಗೆ ಲಾಬಿ ಮಾಡದೆ ಕ್ಷೇತ್ರಗಳಿಗೆ ಹಿಂತಿರುಗುವಂತೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಸಂಸದರಿಗೆ ತಾಕೀತು ಮಾಡಿದ್ದಾರೆ. ಮೋದಿ ಅವರ ಖಡಕ್‌ ಸೂಚನೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳಿಂದ ರಾಜಧಾನಿಯಲ್ಲಿ ಬೆಂಬಲಿಗರ ಜತೆ ಬೀಡು ಬಿಟ್ಟಿದ್ದ ರಾಜ್ಯದ ಕೆಲವು ಲೋಕಸಭೆ ಸದಸ್ಯರು ಗಂಟು ಮೂಟೆ ಕಟ್ಟಿದ್ದಾರೆ.

ಸಂಸತ್‌ ಭವನದಲ್ಲಿ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ ಬಳಿಕ ಹೊಸ ಸಂಸದರು ಊರುಗಳಿಗೆ ಹಿಂತಿರು­ಗಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಪಕ್ಷದ ಮುಖಂಡರಾದ ಬಿ.ಎಸ್‌. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ ಶೆಟ್ಟರ್‌,  ಕೆ.  ಎಸ್‌. ಈಶ್ವರಪ್ಪ, ಆಯನೂರು ಮಂಜು­ನಾಥ್‌, ಜಿ.ಎಂ. ಸಿದ್ದೇಶ್ವರ್‌, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ದೆಹಲಿಗೆ ಬಂದಿದ್ದರು.

ಕರ್ನಾಟಕ ಭವನದಲ್ಲಿ ತಂಗಿದ್ದ ರಾಜ್ಯದ ನಾಯಕರು ಭಾನು­ವಾರ ಬೆಳಿಗ್ಗೆ ಪಕ್ಕದಲ್ಲೇ ಇರುವ ಗುಜರಾತ್‌ ಭವನಕ್ಕೆ ಹೋಗಿ ಭಾವಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕರ್ನಾಟಕ ಹದಿನೇಳು ಬಿಜೆಪಿ ಸಂಸ­ದರನ್ನು ಗೆಲ್ಲಿಸಿ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ರಾಜ್ಯಕ್ಕೆ ಹೆಚ್ಚು ಪ್ರಾತಿನಿಧ್ಯ ಕೊಡಬೇಕು ಎಂದು ಮನವಿ ಮಾಡಿದರು.

ರಾಜ್ಯದ ಮುಖಂಡರ ವಾದವನ್ನು ಆಲಿಸಿದ ಮೋದಿ, ‘ಸಂಪುಟದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸ್ಥಾನ ಕೊಡ­ಬೇಕು. ಯಾರಿಗೆ ಮಂತ್ರಿ ಮಾಡಬೇಕು. ಯಾವ ಖಾತೆಗಳನ್ನು ಕೊಡಬೇಕು ಎಂದು ನನಗೆ ಗೊತ್ತಿದೆ. ನೀವು ಊರುಗಳಿಗೆ ವಾಪಸ್‌ ಹೋಗಿ. ದೆಹಲಿಯಲ್ಲಿ ಕುಳಿತು ಲಾಬಿ ಮಾಡುವುದು ಬೇಡ. ಲಾಬಿಗೆ ನಾನು ಮಣಿಯುವುದಿಲ್ಲ’ ಎಂದು ಖಡಕ್‌ ಆಗಿ ಹೇಳಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮೋದಿ ಅವರ ಖಡಕ್‌ ಮಾತಿಗೆ ಬೆಚ್ಚಿದ ಕೆಲವು ಮುಖಂಡರು ಅಂದೇ ಗಂಟು ಮೂಟೆ ಕಟ್ಟಿದರು. ಲೋಕಸಭೆಗೆ ಆಯ್ಕೆಯಾಗಿರುವ ಸದಸ್ಯರು ಇಲ್ಲೇ ಉಳಿದಿದ್ದರು. ಮಂಗಳವಾರ ಸಂಸದೀಯ ಪಕ್ಷದ ಸಭೆ ಮುಗಿಸಿದ ಬಳಿಕ ವಾಪಸ್‌ ಹೋದರು. ನಾಲ್ಕು ದಿನಗಳಿಂದ ಬಿಜೆಪಿ ಲೋಕಸಭೆ ಸದಸ್ಯರು ಹಾಗೂ ಅವರ ಬೆಂಬಲಿಗರಿಂದ ಕಿಕ್ಕಿರಿದಿದ್ದ ಕರ್ನಾಟಕ ಭವನ ರಾಜಕೀಯ ಚಟುವಟಿಕೆ ಇಲ್ಲದೆ ಭಣಗುಡುತ್ತಿದೆ.

‘ನಿಮ್ಮ ರಾಜ್ಯದಲ್ಲಿ ಸಂಪೂರ್ಣವಾಗಿ ಬಿಜೆಪಿ ಗೆಲ್ಲಿಸಲು ನೀವು ಸೋತಿದ್ದೀರಿ. ಕಾಂಗ್ರೆಸ್‌ಗೆ ಒಂಬತ್ತು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದೀರಿ. ಎಲ್ಲರಿಗೂ ಸಂಪುಟದಲ್ಲಿ ಅವಕಾಶ ಕೊಡು­ವುದು ಕಷ್ಟ. ಕೆಲವರು ಪಕ್ಷದಲ್ಲೂ ಕೆಲಸ ಮಾಡಬೇಕಾಗುತ್ತದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಿ. ಕಾಂಗ್ರೆಸ್‌ ಪಕ್ಷವನ್ನು ಬುಡಸಹಿತ ಕಿತ್ತೊಗೆಯಿರಿ’ ಎಂದು ಮೋದಿ ಸೂಚಿಸಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮೋದಿ ಅವರ ಸಂಪುಟ ಸೇರಲು ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್‌, ರಮೇಶ್‌ ಜಿಗ­ಜಿಣಗಿ, ಶೋಭಾ ಕರಂದ್ಲಾಜೆ, ಸಿದ್ದೇಶ್ವರ್‌ ಹಾಗೂ ಸುರೇಶ್‌ ಅಂಗಡಿ ಸೇರಿದಂತೆ ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿ­ಸುತ್ತಿರುವ ಯಡಿಯೂರಪ್ಪ ಸ್ವಲ್ಪ ಆತಂಕದಲ್ಲಿ ಇದ್ದಾರೆ ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.