ADVERTISEMENT

ಸತ್ತವರ ಸಂಖ್ಯೆ 50ಕ್ಕೆ ಏರಿಕೆ

ಉತ್ತರ ಪ್ರದೇಶದಲ್ಲಿ ಶೀತಗಾಳಿ: ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ಲಖನೌ: ಉತ್ತರ ಪ್ರದೇಶದಲ್ಲಿ 2 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣಾಂಶದ ಶೀತಗಾಳಿ ಬೀಸುತ್ತಿದ್ದು, ಚಳಿಯ ಕಾರಣ ಸಾವಿಗೀಡಾದವರ ಸಂಖ್ಯೆ 50ಕ್ಕೆ ಏರಿದೆ. ಶಾಲೆಗಳಿಗೆ ಚಳಿಗಾಲದ ರಜೆ ಘೋಷಿಸಲಾಗಿದ್ದು, ಕಾನ್ಪುರ, ಮಹೋಬ, ಬಂಡಾ, ಔರೈಯಾ, ಉನಾವೊ ಮತ್ತು ಚಿತ್ರಕೂಟ ಜಿಲ್ಲೆಗಳಲ್ಲಿ ಕಳೆದ 24 ಗಂಟೆಯಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ.

ಲಖನೌದಿಂದ 400 ಕಿ.ಮೀ ದೂರದಲ್ಲಿರುವ ನಾಜಿಯಾಬಾದ್‌ನಲ್ಲಿ 1.5 ಡಿಗ್ರಿಯ ಅತಿ ಕಡಿಮೆ ಉಷ್ಣಾಂಶ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಅತಿ ಚಳಿ ಬೀಳುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಕಳೆದ 10 ವರ್ಷಗಳಲ್ಲೇ ಅತಿ ಕಡಿಮೆ ಉಷ್ಣತೆ ದಾಖಲಾಗಿದೆ.

ಮಂಜು ಕವಿದ ವಾತಾವರಣ­ದಿಂದಾಗಿ  ರೈಲು ಮತ್ತು ವಿಮಾನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ. ರಾಜ್ಯದಲ್ಲಿ ಶೀತ ಮತ್ತು ಮಸುಕಿನ ವಾತಾವರಣ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕುಸಿದ ತಾಪಮಾನ: ತತ್ತರಿಸಿದ ತೆಲಂಗಾಣ
ಹೈದರಾಬಾದ್‌:
ಬಿರು ಬಿಸಿಲಿನ ನಾಡು ತೆಲಂಗಾಣ ಶೀತಗಾಳಿ ಹಾಗೂ ಚಳಿಯಿಂದ ತತ್ತರಿಸಿದ್ದು, ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ಕೆಳಗೆ ಕುಸಿದಿದೆ. 

ಮೈಕೊರೆಯುವ ಚಳಿಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹೈದರಾ­ಬಾದ್‌, ಆದಿಲಾಬಾದ್‌, ನಲಗೊಂಡಾ ಮತ್ತು ಖಮ್ಮಂ ಜಿಲ್ಲೆ ಹಾಗೂ ತೆಲಂಗಾಣಕ್ಕೆ ಹೊಂದಿಕೊಂಡಿ­ರುವ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ತಾಪಮಾನ 4–5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.
ಮಧ್ಯಾಹ್ನದ ನಂತರವೂ ಮಂಜು ಕವಿದ ವಾತಾವರಣವಿದ್ದು ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ.

ಕರಾವಳಿ ಜಿಲ್ಲೆಗಳಾದ ವಿಶಾಖ­ಪಟ್ಟಣ, ಮಚಲಿಪಟ್ಟಣ, ಕಾಕಿನಾಡ, ಕಳಿಂಗಪಟ್ಟಣದಲ್ಲೂ ತಾಪಮಾನ ಕುಸಿದಿದ್ದು, ಇದಕ್ಕಿಂತ ಭಿನ್ನ ಪರಿಸ್ಥಿತಿ ಇಲ್ಲ. ಈಶಾನ್ಯ ಭಾಗದಿಂದ  ಶೀತಗಾಳಿ ಬೀಸುತ್ತಿರುವುದರಿಂದ ಇನ್ನೂ ಕೆಲವು ದಿನ ತೆಲಂಗಾಣ ಮತ್ತು ಆಂಧ್ರದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT