ADVERTISEMENT

ಸಹಜ ಸ್ಥಿತಿಗೆ ಮರಳುತ್ತಿರುವ ಕಾಶ್ಮೀರ

ಪಿಟಿಐ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಸೋಮವಾರ ತೆರವುಗೊಳಿಸಿದ ಬಳಿಕ ಸಾರ್ವಜನಿಕರು ಬೈಕ್‌ಗಳಲ್ಲಿ ಸಂಚರಿಸಿದರು   – ಪಿಟಿಐ ಚಿತ್ರ
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಸೋಮವಾರ ತೆರವುಗೊಳಿಸಿದ ಬಳಿಕ ಸಾರ್ವಜನಿಕರು ಬೈಕ್‌ಗಳಲ್ಲಿ ಸಂಚರಿಸಿದರು – ಪಿಟಿಐ ಚಿತ್ರ   

ಶ್ರೀನಗರ/ನವದೆಹಲಿ: ಹಿಂಸಾಚಾರದಿಂದ ನಲುಗಿದ ಕಾಶ್ಮೀರದಲ್ಲಿ ಜನಜೀವನ ನಿಧಾನಗತಿಯಲ್ಲಿ ಸಹಜ ಸ್ಥಿತಿಗೆ ಮರುಳುತ್ತಿದೆ. ಮೂರು ಪೊಲೀಸ್‌ ಠಾಣೆ ವ್ಯಾಪ್ತಿ ಹೊರತುಪಡಿಸಿ ಉಳಿದೆಡೆ ಕರ್ಫ್ಯೂ ತೆರವುಗೊಳಿಸಲಾಗಿದೆ.

ಹಿಜ್ಬುಲ್‌ ಕಮಾಂಡರ್‌ ಬುರ್ಹಾನ್‌ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದು, ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ 68 ಮಂದಿ ಮೃತಪಟ್ಟಿದ್ದಾರೆ. 

‘ಪುಲ್ವಾಮಾ ಮತ್ತು ಶ್ರೀನಗರದ ಎಂ. ಆರ್‌. ಗುಂಜ್‌ ಹಾಗೂ ನೊವಟ್ಟಾ ಪೊಲೀಸ್‌ ಠಾಣೆ ವ್ಯಾಪ್ತಿ ಹೊರತುಪಡಿಸಿ ಉಳಿದೆಡೆಗಳಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಇನ್ನೂ ಮೊಬೈಲ್‌ ಅಂತರ್ಜಾಲ ಸೌಲಭ್ಯವನ್ನು ಗ್ರಾಹಕರಿಗೆ ಮುಕ್ತಗೊಳಿಸಿಲ್ಲ. ವಾನಿ ಹತ್ಯೆ ಬಳಿಕ ನಡೆದ ಹಿಂಸಾಚಾರದಲ್ಲಿ ನಡೆದ ನಾಗರಿಕ ಹತ್ಯೆ ಖಂಡಿಸಿ ಪ್ರತ್ಯೇಕತಾವಾದಿಗಳು ಸೆಪ್ಟೆಂಬರ್‌ ವರೆಗೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. 

ಅಪರೂಪಕ್ಕೊಮ್ಮೆ ಪೆಲೆಟ್‌ ಬಂದೂಕು ಬಳಕೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆಕೋರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪೆಲೆಟ್‌ ಬಂದೂಕು ಬಳಕೆಯನ್ನು ಸಂಪೂರ್ಣವಾಗಿ ಕೈಬಿಡುವುದಿಲ್ಲ. ಆದರೆ ಅದನ್ನು ತೀರಾ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.