ADVERTISEMENT

ಸಹಾಯವಾಣಿ ತೆರೆದ ವಿದೇಶಾಂಗ ಇಲಾಖೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2015, 11:06 IST
Last Updated 25 ಏಪ್ರಿಲ್ 2015, 11:06 IST

ನವದೆಹಲಿ (ಪಿಟಿಐ): ನೆರೆಯ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಇಲಾಖೆಯು ದಿನದ 24 ಗಂಟೆಗಳ ಕಾಲ ಎಲ್ಲಾ ಬಗೆಯ ನೆರವಿಗಾಗಿ ಸಹಾಯವಾಣಿ ತೆರೆದಿದೆ.

ವಿದೇಶಾಂಗ ಇಲಾಖೆ ಸ್ಥಾಪಿಸಿರುವ ಸಹಾಯವಾಣಿ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಗಳು ಇಂತಿವೆ. +91 11 2301 2113, +91 11 2301 4104 ಹಾಗೂ +91 11 2301 7905.

ಮತ್ತೊಂದೆಡೆ, ವಿಪತ್ತಿನ ಈ ಸಂದರ್ಭದಲ್ಲಿ ಭಾರತವು ನೆರವು ನೀಡಲಿದೆ ಎಂದು ನೇಪಾಳಕ್ಕೆ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ.ಕೆ.ಸಿಂಗ್ ಅವರು ಭರವಸೆ ನೀಡಿದ್ದಾರೆ.

‘ಭೂಕಂಪದಿಂದ ಸಂಕಷ್ಟಕ್ಕೀಡಾಗಿರುವವರಿಗೆ ಎಲ್ಲಾ ಬಗೆಯ ಬೆಂಬಲ ಹಾಗೂ ನೆರವು ನೀಡುವ ಪ್ರಯತ್ನ ನಮ್ಮದು’ ಎಂದು ಸಿಂಗ್ ಟ್ವೀಟ್‌ ಮಾಡಿದ್ದಾರೆ.

ತಮ್ಮ ರಾಷ್ಟ್ರಕ್ಕೆ ‌ಭಾರತದಿಂದ ಸಂಚಾರಿ ವೈದ್ಯಕೀಯ ಘಟಕಗಳ ಜತೆಗೆ ಇತರ ನೆರವಿನ ಅಗತ್ಯವಿದೆ ಎಂದು ನವದೆಹಲಿಯಲ್ಲಿರುವ ನೇಪಾಳ ರಾಜತಾಂತ್ರಿಕ ಅಧಿಕಾರಿ ದೀಪ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.

ನೆರವಿಗೆ ಮುಂದಾಗಿರುವ ಭಾರತಕ್ಕೆ ಧನ್ಯವಾದ ತಿಳಿಸಿರುವ ಅವರು, ‘ನಾವು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ನಮ್ಮ ಅಧ್ಯಕ್ಷರೂ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ನಮಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ. ನೆರವಿಗೆ ಮುಂದಾಗಿದ್ದಕ್ಕಾಗಿ ನೇಪಳದ ಪರವಾಗಿ ಭಾರತಕ್ಕೆ ನಾನು ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.

ADVERTISEMENT

ನೇಪಾಳದ ನೆರವಿಗಾಗಿ ಭಾರತವು ಸಾರಿಗೆ ಏರ್‌ಕ್ರಾಫ್ಟ್‌, ಸಿ 17 ಗ್ಲೋಬ್‌ಮಾಸ್ಟರ್‌, ಸಿ–130 ಹರ್ಕ್ಯೂಲೆಸ್‌ ಹಾಗೂ ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.