ADVERTISEMENT

ಸಾಮಾಜಿಕ ಜಾಲತಾಣ ದುರ್ಬಳಕೆ

ಕೋಬ್ರಾಪೋಸ್ಟ್‌ ಕುಟುಕು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2013, 19:30 IST
Last Updated 29 ನವೆಂಬರ್ 2013, 19:30 IST

ನವದೆಹಲಿ (ಪಿಟಿಐ): ‘ಕೆಲವು ಐ.ಟಿ ಕಂಪೆನಿಗಳು ಫೇಸ್‌ಬುಕ್‌, ಯೂಟ್ಯೂಬ್‌ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ’ ಎಂದು ತನಿಖಾ ವೆಬ್‌ಸೈಟ್‌ ‘ಕೋಬ್ರಾಪೋಸ್ಟ್‌’ ಆರೋಪಿಸಿದೆ.

‘ಕೆಲವು ಮುಖಂಡರಿಗೆ ಕೃತಕವಾಗಿ ಜನಪ್ರಿಯತೆ ತಂದುಕೊಡುತ್ತಿದ್ದರೆ, ಅವರ ವಿರೋಧಿಗಳ ಚಾರಿತ್ರ್ಯಹರಣ ಮಾಡಲಾಗುತ್ತಿದೆ. ಹಲವು ಐ.ಟಿ ಕಂಪೆನಿಗಳು ಬಿಜೆಪಿ ಮತ್ತು ಆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿವೆ’ ಎಂದು ತಿಳಿಸಿದೆ.

ದೇಶದಾದ್ಯಂತ ಸುಮಾರು ಎರಡು ಡಜನ್‌ಗೂ ಹೆಚ್ಚು ಐ.ಟಿ ಕಂಪೆನಿಗಳ ಕಾರ್ಯವೈಖರಿ ಕುರಿತು ನಡೆಸಿದ ‘ಆಪರೇಷನ್‌ ಬ್ಲೂ ವೈರಸ್‌’ ಕುಟುಕು ಕಾರ್ಯಾಚರಣೆಯಿಂದ ಈ ವಿಷಯ ತಿಳಿದು ಬಂದಿರುವುದಾಗಿ ಕೋಬ್ರಾಪೋಸ್ಟ್‌ ಹೇಳಿಕೊಂಡಿದೆ.

‘ಅಕ್ರಮವಾಗಿ ಬೇರೆಯವರ ಐ.ಪಿ ವಿಳಾಸಗಳನ್ನು ಬಳಸಿಕೊಂಡು ಮಾನಹಾನಿಕರ ಅಂಶಗಳನ್ನು ಹರಿ ಬಿಡಲಾಗುತ್ತಿದೆ. ಸುಳ್ಳು ಅಭಿಮಾನಿಗಳನ್ನು ಸೃಷ್ಟಿಸಲಾಗುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಮುಖಂಡರ ಪ್ರತಿಷ್ಠೆ ಹೆಚ್ಚಿಸುವ ಕಾರ್ಯ ಮಾಡುತ್ತಿರುವುದನ್ನು ಕಂಡುಕೊಳ್ಳಲಾಗಿದೆ. ಕೇವಲ ಹಣ ಗಳಿಕೆಗಾಗಿ ಅವುಗಳು ಈ ಕಾರ್ಯದಲ್ಲಿ ತೊಡಗಿವೆ’ ಎಂದು ಕೋಬ್ರಾಪೋಸ್ಟ್‌ ಸಂಪಾದಕ ಅನಿರುದ್ಧ ಬಹಾಲ್‌ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾಮಾಜಿಕ ಜಾಲತಾಣಗಳ ಮೂಲಕ  ಪ್ರಚಾರ ಕೈಗೊಂಡಿರುವವರಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಆ ಪಕ್ಷದ ಪ್ರಧಾನಿ ಅಭ್ಯರ್ಥಿ ಪರವಾಗಿ ಅವಧಿಗಿಂತ ಹೆಚ್ಚಿನ ಸಮಯ ಐ.ಟಿ ಕಂಪೆನಿಗಳು ಕೆಲಸ ನಿರ್ವಹಿಸುತ್ತಿರುವುದು ಕುಟುಕು ಕಾರ್ಯಾಚರಣೆಯಿಂದ ತಿಳಿದು ಬಂದಿದೆ. ಈ ಕಂಪೆನಿಗಳು ಇತರ ಪಕ್ಷಗಳ ಪರವಾಗಿ ಕಾರ್ಯ ಮಾಡುತ್ತಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.