ADVERTISEMENT

ಸಾಲ ಮನ್ನಾ: ಕೇಂದ್ರದ ನೆರವಿಲ್ಲ

ಪಿಟಿಐ
Published 23 ಮಾರ್ಚ್ 2017, 20:01 IST
Last Updated 23 ಮಾರ್ಚ್ 2017, 20:01 IST
ಸಾಲ ಮನ್ನಾ: ಕೇಂದ್ರದ ನೆರವಿಲ್ಲ
ಸಾಲ ಮನ್ನಾ: ಕೇಂದ್ರದ ನೆರವಿಲ್ಲ   

ನವದೆಹಲಿ: ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ರೈತರ ಸಾಲ ಮನ್ನಾ ಮಾಡುವುದಿದ್ದರೆ ರಾಜ್ಯ ಸರ್ಕಾರಗಳೇ ತಮ್ಮ ಸಂಪನ್ಮೂಲದಿಂದ  ಆ ಹೊರೆಯನ್ನು ಭರಿಸಬೇಕು ಎಂದು ಅವರು ಹೇಳಿದ್ದಾರೆ.
ಆಯ್ದ ಕೆಲವು ರಾಜ್ಯಗಳಿಗೆ ನೆರವು ನೀಡಿ ಕೆಲವು ರಾಜ್ಯಗಳಿಗೆ ನೆರವು ನೀಡದಿರುವ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರೈತರ ಸಾಲ ಮನ್ನಾ ಮಾಡುವ ವಿಚಾರ ಹಲವು ರಾಜ್ಯಗಳಲ್ಲಿ ಚರ್ಚೆಯಾಗುತ್ತಿದೆ. ಕೇಂದ್ರಕ್ಕೆ ತನ್ನದೇ ಆದ ಕೃಷಿ ನೀತಿ ಇದೆ. ಈ ನೀತಿ ಅಡಿ ಬಡ್ಡಿ ಸಹಾಯಧನ ಮತ್ತು ಇತರ ನೆರವು ಒದಗಿಸಲಾಗುತ್ತಿದೆ. ಅದನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಉತ್ತರ ಪ್ರದೇಶ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ ನೀಡಿತ್ತು. ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ ಎಂದು ಅಲ್ಲಿ ಬಿಜೆಪಿ ಸರ್ಕಾರ ರಚನೆ ಆದ ನಂತರ ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಹೇಳಿದ್ದರು.

ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಲು ಕೇಂದ್ರ ನೆರವು ನೀಡಲಿದೆ ಎಂದು ಈ ಹೇಳಿಕೆಯನ್ನು ವ್ಯಾಖ್ಯಾನಿಸಲಾಗಿತ್ತು. ಉತ್ತರ ಪ್ರದೇಶವಲ್ಲದೆ ಎಲ್ಲ ರಾಜ್ಯಗಳಿಗೂ ಕೇಂದ್ರ ನೆರವು ನೀಡಬೇಕು ಎಂದು ಕಾಂಗ್ರೆಸ್‌ ಪಕ್ಷ ಒತ್ತಾಯ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.