ADVERTISEMENT

ಸಿಎಜಿ ವ್ಯಾಪ್ತಿಗೆ ಖಾಸಗಿ ಕಂಪೆನಿ ಲೆಕ್ಕಪತ್ರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ನವದೆಹಲಿ: ನೈಸರ್ಗಿಕ ಸಂಪನ್ಮೂಲಗಳ ವ್ಯವಹಾರ ನಡೆಸುವ ಖಾಸಗಿ ಕಂಪೆನಿಗಳ ಲೆಕ್ಕಪತ್ರಗಳನ್ನೂ ಮಹಾ ಲೇಖಪಾಲರು (ಸಿಎಜಿ) ಪರಿಶೋಧನೆಗೆ ಒಳ­ಪಡಿಸುವ ಅಧಿಕಾರ ಹೊಂದಿರುತ್ತಾರೆಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ನೀಡಿದೆ.

ನೈಸರ್ಗಿಕ ಸಂಪನ್ಮೂಲದ ವ್ಯವಹಾರ ನಡೆಸುವ ಖಾಸಗಿ ಟೆಲಿಕಾಂ ಕಂಪೆನಿಗಳ ಜತೆ ಒಪ್ಪಂದ ಮಾಡಿ­ಕೊಂಡ ನಂತರ ಸರ್ಕಾರದ ಬೊಕ್ಕಸಕ್ಕೆ ನ್ಯಾಯವಾಗಿ ಬರಬೇಕಾದ ಪಾಲು ಸಂದಾಯವಾಗುತ್ತಿದೆಯೇ ಎಂದು ತಿಳಿದುಕೊಳ್ಳಲು ಲೆಕ್ಕಪತ್ರ ಪುಸ್ತಕ ಇಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ತರಂಗಾಂತರದಂತಹ ರಾಷ್ಟ್ರೀಯ ಸಂಪತ್ತನ್ನು ಹಂಚಿಕೆ ಮಾಡುವ ಕೇಂದ್ರ ಮತ್ತು ರಾಜ್ಯ ಸರ್ಕಾರ­ಗಳು, ಸೇವೆ ಒದಗಿಸುವ ಖಾಸಗಿ ಸಂಸ್ಥೆಗಳು ಜನರಿಗೆ ಮತ್ತು ಸಂಸತ್ತಿಗೆ ಉತ್ತರದಾಯಿತ್ವ ಹೊಂದಿರಬೇಕಾ­ಗುತ್ತದೆ ಎಂದು ನ್ಯಾಯಮೂರ್ತಿ ಕೆ. ಎಸ್. ರಾಧಾಕೃಷ್ಣನ್‌ ಮತ್ತು ವಿಕ್ರಮಜಿತ್‌ ಸೆನ್ ಅವರನ್ನು ಒಳಗೊಂಡ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಅಧಿಕಾರಿಗಳು ಪರವಾನಗಿ ಹೊಂದಿದ ಕಂಪೆನಿಗಳ ಜತೆ ಶಾಮೀಲಾಗುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವ ಸಾಧ್ಯತೆಗಳೇ ಹೆಚ್ಚು ಎಂದು ನ್ಯಾಯ­ಮೂರ್ತಿ­ಗಳು ತಿಳಿಸಿದ್ದಾರೆ. ಪ್ರಮುಖ ಖಾಸಗಿ ಟೆಲಿ­ಕಾಂ ಕಂಪೆನಿಗಳಾದ ಭಾರ್ತಿ ಏರ್‌ಟೆಲ್‌, ವೊಡಾ­ಫೋನ್‌ ಮುಂತಾದ ಕಂಪೆನಿಗಳು ಸಿಎಜಿ ಕೇಳಿರುವ ದಾಖಲೆ ಒದಗಿಸುವಂತೆ ನ್ಯಾಯಪೀಠ ಆದೇಶಿಸಿದೆ.

ಆದರೆ ಸಿಎಜಿ ಖಾಸಗಿ ಸೇವೆ ಒದಗಿಸುವ ಕಂಪೆನಿಗಳ ಲೆಕ್ಕಪತ್ರಗಳನ್ನು ಕಾನೂನು ಬದ್ಧವಾಗಿ ಪರಿಶೋಧನೆಗೆ ಒಳಪಡಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಆದರೆ ಖಾಸಗಿ ಕಂಪೆನಿಗಳ ಆದಾಯವನ್ನು ಪರಿಶೀಲಿಸಿ ಸರ್ಕಾರಕ್ಕೆ ಬರಬೇಕಾದ ಪಾಲು ಸರಿಯಾಗಿ ಬರುತ್ತಿದೆಯೇ ಎಂದು ಸಿಎಜಿ ಪರಿಶೀಲಿಸಬಹುದಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಖಾಸಗಿ ಕಂಪೆನಿಗಳ ಆದಾಯದ ಲೆಕ್ಕಪತ್ರಗಳನ್ನು ಸಿಎಜಿ ಪರಿಶೋಧಿಸಬಹುದಾಗಿದೆ ಎಂಬ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಟೆಲಿಕಾಂ ಸೇವೆ ಒದಗಿಸುವ ಕಂಪೆನಿಗಳ ಸಂಘವು ಸುಪ್ರೀಂಕೋರ್ಟ್‌­ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಕೆಲವು ಟೆಲಿಕಾಂ ಕಂಪೆನಿಗಳು ಸರ್ಕಾರದ ಪಾಲು ನೀಡುವುದನ್ನು ತಪ್ಪಿಸಿಕೊಳ್ಳಲು ಕಡಿಮೆ ಆದಾಯವನ್ನು ತೋರಿಸುತ್ತಿದ್ದುದನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಪತ್ತೆ ಮಾಡಿದ್ದರಿಂದ ಸಿಎಜಿ ಈ ಕಂಪೆನಿಗಳ ಲೆಕ್ಕಪತ್ರಗಳನ್ನು ಪರಿಶೋಧನೆಗೆ ಒಳಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.