ADVERTISEMENT

ಸಿಕ್ಕಿಂ ಬಿಕ್ಕಟ್ಟು ಭಾರತಕ್ಕೆ ಬೆಂಬಲ

ಪಿಟಿಐ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಸಿಕ್ಕಿಂ ಬಿಕ್ಕಟ್ಟು ಭಾರತಕ್ಕೆ ಬೆಂಬಲ
ಸಿಕ್ಕಿಂ ಬಿಕ್ಕಟ್ಟು ಭಾರತಕ್ಕೆ ಬೆಂಬಲ   

ನವದೆಹಲಿ: ಚೀನಾ–ಭಾರತ– ಭೂತಾನ್ ಗಡಿ ಸೇರುವ ಭಾಗದಲ್ಲಿ ರಸ್ತೆ ನಿರ್ಮಿಸುವ ಚೀನಾ ಉದ್ದೇಶದಿಂದಾಗಿ ಗಡಿಯಲ್ಲಿಯ ಯಥಾಸ್ಥಿತಿಗೆ ಧಕ್ಕೆ ತರುತ್ತಿದೆ. ಆದರೆ ಜಗತ್ತಿನ ಎಲ್ಲ ದೇಶಗಳು ಭಾರತದ ನಿಲುವನ್ನು ಬೆಂಬಲಿಸುತ್ತಿವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ರಾಜ್ಯಸಭೆಗೆ ತಿಳಿಸಿದರು.

ದೋಕಲಾ ಪ್ರಸ್ಥಭೂಮಿಯಲ್ಲಿ ಭಾರತ ಮತ್ತು ಚೀನಾ ಸೇನೆ ಎದುರುಬದುರಾಗಿ ನಿಂತು 33 ದಿನ ಕಳೆದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಈ ಬಗ್ಗೆ ಅವರು ಹೇಳಿಕೆ ನೀಡಿದರು.

‘ಸಣ್ಣ ದೇಶವಾದ ಭೂತಾನ್ ವಿರುದ್ಧ ಚೀನಾ ತಳೆದಿರುವ ಆಕ್ರಮಣಕಾರಿ ನಡೆಯನ್ನು ಇಡೀ ಅಂತರರಾಷ್ಟ್ರೀಯ ಸಮುದಾಯ ಗಮನಿಸುತ್ತಿದೆ’ ಎಂದರು.
ದೋಕಲಾದಲ್ಲಿ ಚೀನಾದ ಸೇನೆ ರಸ್ತೆ ನಿರ್ಮಿಸುತ್ತಿರುವ ಬಗ್ಗೆ ಭಾರತದಲ್ಲಿಯ ಭೂತಾನ್ ರಾಯಭಾರಿ ಲಿಖಿತ ಪ್ರತಿಭಟನೆ ದಾಖಲಿಸಿದ್ದಾರೆ ಎಂದು ಸುಷ್ಮಾ ಅವರು ಸದಸ್ಯರ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದರು.

ADVERTISEMENT

ದೋಕಲಾದಲ್ಲಿ ಚೀನಾ ಸೇನೆಯು ರಸ್ತೆ ನಿರ್ಮಿಸುವುದನ್ನು ತಡೆಯಲು ಭಾರತದ ಸೇನೆ ಜೂನ್ 18ರಂದು ಅಲ್ಲಿಗೆ ತೆರಳಿದ ನಂತರ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಗಡಿ ವಿವಾದದ ಬಗ್ಗೆ ಚೀನಾ ಮತ್ತು ಭೂತಾನ್ ಮಾತುಕತೆ ನಡೆಸುತ್ತಿವೆ. ಅದೇ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು ಸಹ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಮೂರು ದೇಶಗಳ ಗಡಿ ಕೂಡುವ ಭಾಗದಲ್ಲಿಯ ವಿವಾದವನ್ನು ಭೂತಾನ್ ಸಲಹೆ ಪಡೆದು ಭಾರತದ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲು ಚೀನಾ 2012ರಲ್ಲಿ ಒಪ್ಪಿಕೊಂಡಿದೆ. ಆದರೂ ಚೀನಾ ಸೇನೆ ಈಗ ಅಲ್ಲಿ ಭರದಿಂದ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ ಎಂದು ಸಚಿವೆ ತಿಳಿಸಿದರು.

ಚೀನಾದ ಈ ಆಕ್ರಮಣಕಾರಿ ಕ್ರಮವು ಭೂತಾನ್ ಮತ್ತು ಭಾರತದ ಭದ್ರತೆಗೆ ಆತಂಕ ಒಡ್ಡಿದೆ. ಎರಡೂ ಕಡೆಯ ಸೈನಿಕರು ವಾಪಸಾಗಬೇಕು ಎಂದು ಭಾರತ ಸಲಹೆ ಮಾಡಿದೆ ಎಂದು ತಿಳಿಸಿದರು. ಈ ಎಲ್ಲಾ ಬೆಳವಣಿಗೆಯಿಂದಾಗಿ ಭಾರತ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದರು.

ಭಾರತ ಮತ್ತು ಚೀನಾ ಸೇನೆ ಗಡಿಯಲ್ಲಿ ಮುಖಾಮುಖಿ ಆಗಿ ನಿಂತಿರುವುದರಿಂದ ಈ ಬಗ್ಗೆ ವಿಸ್ತೃತ ಚರ್ಚೆ ಆಗಬೇಕು ಎಂದು ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್ ಅವರು ಸಲಹೆ ಮಾಡಿದರು.

ಬೀಜಿಂಗ್‌ಗೆ ಡೊಭಾಲ್:  ಬೀಜಿಂಗ್‌ನಲ್ಲಿ ಈ ತಿಂಗಳ 27 ಮತ್ತು 28ರಂದು ನಡೆಯಲಿರುವ ಬ್ರಿಕ್ಸ್ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್  ಭಾಗವಹಿಸಲಿದ್ದಾರೆ.

ದೋಕಲಾದಲ್ಲಿ ಚೀನಾ ಮತ್ತು ಭಾರತ ಸೇನೆಯ ಮಧ್ಯೆ ಉದ್ವಿಗ್ನ ಸ್ಥಿತಿ ಉಂಟಾಗಿರುವ ಸಂದರ್ಭದಲ್ಲಿ ಡೊಭಾಲ್ ಅವರ ಚೀನಾ ಭೇಟಿ ಮಹತ್ವ ಪಡೆದುಕೊಂಡಿದೆ.

ರಾಜತಾಂತ್ರಿಕ ಮಾರ್ಗ ಮುಕ್ತ: ಚೀನಾ

ಬೀಜಿಂಗ್ (ಪಿಟಿಐ): ಭಾರತ–ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ರಾಜತಾಂತ್ರಿಕ ಮಾರ್ಗಗಳು ಮುಕ್ತವಾಗಿವೆ ಎಂದು ಚೀನಾ ಹೇಳಿದೆ.

ಆದರೆ ಸಿಕ್ಕಿಂನ ದೋಕಲಾ ಪ್ರದೇಶದಲ್ಲಿ ಭಾರತದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಷರತ್ತು ಒಪ್ಪಿಕೊಂಡರೆ ಮಾತ್ರ ಅರ್ಥಪೂರ್ಣ ಮಾತುಕತೆ ಸಾಧ್ಯ ಎಂದು ಚೀನಾ ಪುನರುಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.