ADVERTISEMENT

ಸಿಗಬಹುದೇ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ?

ಮುಂಬೈನ ಹಾಜಿ ಅಲಿ ದರ್ಗಾ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
ಸಿಗಬಹುದೇ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ?
ಸಿಗಬಹುದೇ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ?   

ನವದೆಹಲಿ: ಮುಂಬೈನ ಪ್ರಸಿದ್ಧ ಹಾಜಿ ಅಲಿ ದರ್ಗಾದೊಳಕ್ಕೆ ಮಹಿಳೆಯರೂ ಪ್ರವೇಶಿಸಬಹುದು ಎಂದು ಬಾಂಬೆ ಹೈಕೋರ್ಟ್‌ ಆದೇಶ ನೀಡಿದ ನಂತರ, ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕುತೂಹಲ ಕೆರಳಿಸಿದೆ.

ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಂಎಂಎ) ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌, ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಸಂವಿಧಾನದ 14 (ಸಮಾನತೆ), 15 (ತಾರತಮ್ಯದ ನಿಷೇಧ) ಮತ್ತು 25ನೇ (ಧಾರ್ಮಿಕ ಸ್ವಾತಂತ್ರ್ಯ) ವಿಧಿಗಳ ಉಲ್ಲಂಘನೆ ಎಂದು ಹೇಳಿದೆ.

ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯಸ್ಸಿನ ನಡುವಣ ಹೆಣ್ಣುಮಕ್ಕಳಿಗೆ, ಮಹಿಳೆಯರಿಗೆ ಪ್ರವೇಶ ಇಲ್ಲ. ಇದನ್ನು ಪ್ರಶ್ನಿಸಿ ಭಾರತೀಯ ಯುವ ವಕೀಲರ ಸಂಘ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದು ವಿಚಾರಣೆಯ ಹಂತದಲ್ಲಿದೆ.

ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕ್ರಮವನ್ನು ಕೇರಳದ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಮರ್ಥಿಸಿತ್ತು. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಎಡರಂಗ ಸರ್ಕಾರ ಕೂಡ ಈಗ ಇದೇ ನಿಲುವನ್ನು ಬೆಂಬಲಿಸಿದೆ.

ಮಹಿಳೆಯರ ಹಕ್ಕುಗಳು ಹಾಗೂ ದೇವಸ್ಥಾನದ ಪದ್ಧತಿಯ ನಡುವೆ ಸಮತೋಲನ ಕಂಡುಕೊಳ್ಳಬೇಕಿದೆ ಎಂದು ಒಮ್ಮೆ ಹೇಳಿದ್ದ ಸುಪ್ರೀಂ ಕೋರ್ಟ್‌, ಕೇರಳ ಸರ್ಕಾರದ ನಿಲುವಿಗೆ ಆಶ್ಚರ್ಯ ವ್ಯಕ್ತಪಡಿಸಿತ್ತು.

ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಿರುವುದನ್ನು ಈ ವರ್ಷದ ಫೆಬ್ರುವರಿಯಲ್ಲಿ ಸಮರ್ಥಿಸಿದ್ದ ಕೇರಳ ಸರ್ಕಾರ, ‘ಅಲ್ಲಿನ ಪದ್ಧತಿಗಳು, ಆಚರಣೆಗಳು ಹಾಗೂ ಪೂಜಾ ವಿಧಾನಗಳು ಧರ್ಮಕ್ಕೆ ಸಂಬಂಧಿಸಿವೆ. ಇವಕ್ಕೆ ಸಂವಿಧಾನವೇ ರಕ್ಷಣೆ ನೀಡಿದೆ’ ಎಂದು ಹೇಳಿತ್ತು.

ಶಬರಿಮಲೆ ದೇವಸ್ಥಾನವು ಅನನ್ಯವಾಗಿದೆ. ಅಲ್ಲಿ ಮುಸ್ಲಿಮರೂ ಸೇರಿದಂತೆ ಬೇರೆ ಬೇರೆ ನಂಬಿಕೆಗಳ ಜನರಿಗೆ ಪ್ರವೇಶ ಇದೆ. ಹಾಗಾಗಿ, ಭಕ್ತರಿಗೆ ಪ್ರವೇಶ ನೀಡುವ ವಿಚಾರದಲ್ಲಿ ಅಲ್ಲಿನ ಅರ್ಚಕರು ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದು ಕೇರಳ ಸರ್ಕಾರ ವಾದಿಸಿತ್ತು.

ಮಹಿಳೆಯರು ಮತ್ತು ಪುರುಷರು ಸಮಾನರು ಎಂಬುದು ಸಂವಿಧಾನ ನೀಡಿರುವ ಸಂದೇಶ. ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದನ್ನು ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ತರಲಾಗದು ಎಂದು ಕಳೆದ ಬಾರಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ಅಗತ್ಯ ಕಂಡುಬಂದರೆ ಈ ವಿಚಾರವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಬಹುದು ಎಂದು ಕೋರ್ಟ್‌ ಹೇಳಿತ್ತು. ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನವೆಂಬರ್‌ 7ರಂದು ಮತ್ತೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.