ADVERTISEMENT

ಸಿನಿಮಾ, ಮೊಬೈಲ್‌ ದುಬಾರಿ

ಶಿಕ್ಷಣ, ಆರೋಗ್ಯಕ್ಕೆ ವಿನಾಯ್ತಿ

ಪಿಟಿಐ
Published 20 ಮೇ 2017, 9:24 IST
Last Updated 20 ಮೇ 2017, 9:24 IST
ಸಿನಿಮಾ, ಮೊಬೈಲ್‌ ದುಬಾರಿ
ಸಿನಿಮಾ, ಮೊಬೈಲ್‌ ದುಬಾರಿ   

ಶ್ರೀನಗರ: ಸಿನಿಮಾ ವೀಕ್ಷಣೆ, ಏ.ಸಿ ರೆಸ್ಟೊರೆಂಟ್ಸ್‌ಗಳಲ್ಲಿ ಊಟ, ಮೊಬೈಲ್‌ ಬಳಕೆ, ಬ್ಯೂಟಿ ಸಲೂನ್‌ಗೆ ಭೇಟಿ ನೀಡುವುದು ಇನ್ನು ಮುಂದೆ ಗ್ರಾಹಕರ ಪಾಲಿಗೆ ದುಬಾರಿಯಾಗಿ ಪರಿಣಮಿಸಲಿವೆ.

ಈ ಎಲ್ಲ ಸೇವೆಗಳು ಗರಿಷ್ಠ ಸೇವಾ ತೆರಿಗೆ ದರವಾದ ಶೇ 28ರ ಅಡಿಯಲ್ಲಿ ಬರಲಿವೆ. ಹೀಗಾಗಿ ಸದ್ಯದ ದರಗಳಿಗೆ ಹೋಲಿಸಿದರೆ ಬಳಕೆದಾರರು ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬಂದಾಗ ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು, ವಿವಿಧ ಸೇವೆಗಳಿಗೆ ಅನ್ವಯಿಸುವ ತೆರಿಗೆ ದರಗಳನ್ನು ಶುಕ್ರವಾರ ಇಲ್ಲಿ ಅಂತಿಮಗೊಳಿಸಿದೆ.

ADVERTISEMENT

ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯು ಸೇವಾ ತೆರಿಗೆಯಿಂದ ವಿನಾಯ್ತಿ ಪಡೆಯಲಿವೆ.

ಏ.ಸಿ ರಹಿತ ರೆಸ್ಟೊರೆಂಟ್ಸ್‌ಗಳು ಊಟದ ಬಿಲ್‌ ಮೇಲೆ ಶೇ 12 ಮತ್ತು ಮದ್ಯ ಪೂರೈಸುವ ಹೋಟೆಲ್‌ಗಳು ಶೇ 18ರಷ್ಟು ಸೇವಾ ತೆರಿಗೆ ವಿಧಿಸಲಿವೆ.
ದೂರಸಂಪರ್ಕ, ವಿಮೆ, ಹೋಟೆಲ್‌ ಮತ್ತು ರೆಸ್ಟೊರೆಂಟ್ಸ್‌ಗಳನ್ನು ವಿವಿಧ ತೆರಿಗೆ ಹಂತದ ವ್ಯಾಪ್ತಿಗೆ ತರಲಾಗಿದೆ.

‘ಬಹುತೇಕ ಸೇವೆಗಳು ಶೇ 18ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡಲಿವೆ. ಸರಕುಗಳಿಗೆ ಅನ್ವಯಿಸಿರುವ ತೆರಿಗೆ ದರದ ಹಂತಗಳನ್ನೇ (ಶೇ 5, 12, 18, ಮತ್ತು 28)  ಸೇವೆಗಳಿಗೂ ಅನ್ವಯಿಸಲು ಮಂಡಳಿ ನಿರ್ಧರಿಸಿದೆ’  ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಶುಕ್ರವಾರ  ಇಲ್ಲಿ ಹೇಳಿದರು.

‘ಜಿಎಸ್‌ಟಿಯ ಒಟ್ಟು ಪರಿಣಾಮವು ಹಣದುಬ್ಬರಕ್ಕೆ ಎಡೆ ಮಾಡಿಕೊಡುವುದಿಲ್ಲ’  ಎಂದೂ ಭರವಸೆ ನೀಡಿದರು.
ವಿನಾಯ್ತಿ ಮುಂದುವರಿಕೆ: ಇದುವರೆಗೆ ಸೇವಾ ತೆರಿಗೆಯಿಂದ ವಿನಾಯ್ತಿ ಹೊಂದಿರುವ ಸೇವೆಗಳು ಹೊಸ ವ್ಯವಸ್ಥೆಯಲ್ಲಿಯೂ ಈ ಅನುಕೂಲತೆ ಪಡೆಯಲಿವೆ. ಈ ಪಟ್ಟಿಯಲ್ಲಿ ಯಾವುದೇ  ಹೊಸ ಸೇವೆ  ಸೇರ್ಪಡೆ ಮಾಡಿಲ್ಲ.

ಕೆಲ ವಲಯಗಳಲ್ಲಿನ ಸೇವೆಗಳು ಅಗ್ಗವಾಗಲಿವೆ. ಸೇವೆಗಳ ಸ್ವರೂಪ ಆಧರಿಸಿ ಅವುಗಳನ್ನು ವಿಭಿನ್ನ ಬಗೆಯಲ್ಲಿ ವರ್ಗೀಕರಿಸಲಾಗಿದೆ.

ಸಾರಿಗೆ ಸೇವೆಯನ್ನು ಕನಿಷ್ಠ ತೆರಿಗೆ ದರ ಮಟ್ಟವಾದ ಶೇ 5ರ ವ್ಯಾಪ್ತಿಯಲ್ಲಿ ತರಲಾಗಿದೆ. ಇದರಿಂದಾಗಿ ಗ್ರಾಹಕ ಬಳಕೆ ಸರಕುಗಳು, ತರಕಾರಿ ಮತ್ತು ಹಣ್ಣುಗಳ ಬೆಲೆ ನಿಯಂತ್ರಣದಲ್ಲಿ ಇರಲಿದೆ. ಏ.ಸಿ ರಹಿತ ರೈಲ್ವೆ ಪ್ರಯಾಣಕ್ಕೆ ವಿನಾಯ್ತಿ ನೀಡಲಾಗಿದೆ. ಏ.ಸಿ ರೈಲ್ವೆ ಪ್ರಯಾಣ ಮತ್ತು ಇಕಾನಮಿ ದರ್ಜೆಯ ವಿಮಾನ ಪ್ರಯಾಣವು ಸದ್ಯದ ಶೇ 6ರ ಬದಲಿಗೆ ಶೇ  5ರ ವ್ಯಾಪ್ತಿಗೆ ತರಲಾಗಿದೆ. ಮನರಂಜನಾ ತೆರಿಗೆಯನ್ನು ಸೇವಾ ತೆರಿಗೆಯಲ್ಲಿ ಲೀನಗೊಳಿಸಲಾಗಿದೆ. ಇದರಿಂದಾಗಿ ಸಿನಿಮಾ ಟಿಕೆಟ್‌ಗಳ ಮೇಲೆಶೇ 28ರಷ್ಟು ತೆರಿಗೆ ಅನ್ವಯವಾಗಲಿದೆ.    ಸಿನಿಮಾ ಟಿಕೆಟ್‌ಗಳ ಮೇಲೆ ಸದ್ಯಕ್ಕೆ  ಶೇ 40 ರಿಂದ ಶೇ 55ರಷ್ಟು ತೆರಿಗೆ ಜಾರಿಯಲ್ಲಿ ಇದೆ. ಅದಕ್ಕೆ ಹೋಲಿಸಿದರೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕಡಿಮೆ ತೆರಿಗೆ ಇರಲಿದೆ. ಆದರೆ,  ರಾಜ್ಯ ಸರ್ಕಾರಗಳು  ಸ್ಥಳೀಯ ಶುಲ್ಕ ವಿಧಿಸುವ ಅಧಿಕಾರ ಹೊಂದಿರುವುದರಿಂದ ಟಿಕೆಟ್‌ ದರ ಅಗ್ಗವಾಗುವ ಸಾಧ್ಯತೆ ಕಡಿಮೆ ಇದೆ. ಕುದುರೆ ರೇಸ್‌ ಬೆಟ್ಟಿಂಗ್‌ ಕೂಡ  ಇದೇ ದರದ ವ್ಯಾಪ್ತಿಗೆ ಬರಲಿದೆ.

ಚಿನ್ನ ಮತ್ತು ಬೀಡಿಗಳಿಗೆ ಅನ್ವಯಿಸುವ ತೆರಿಗೆ ದರಗಳ ಬಗ್ಗೆ ಮಂಡಳಿಯು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಈ ವಿವಾದಾತ್ಮಕ ಸಂಗತಿಗಳಿಗೆ ಮಂಡಳಿ ಜೂನ್‌ 3ರಂದು ಪರಿಹಾರ ಕಂಡುಕೊಳ್ಳಲಿದೆ.

* ಬಹುತೇಕ ಸೇವೆಗಳಿಗೆ ಸಂಬಂಧಿಸಿದ ತೆರಿಗೆ ವಿನಾಯ್ತಿ ನೀತಿಯು ಮುಂದುವರೆಯಲಿದ್ದು, ‘ಜಿಎಸ್‌ಟಿ’ಯು ಗ್ರಾಹಕ ಸ್ನೇಹಿಯಾಗಿರಲಿದೆ
–ಅರುಣ್‌ ಜೇಟ್ಲಿ,
ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.