ADVERTISEMENT

ಸಿನ್ಹಾ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಸಿನ್ಹಾ ವಿರುದ್ಧ ಪ್ರಕರಣ ದಾಖಲು
ಸಿನ್ಹಾ ವಿರುದ್ಧ ಪ್ರಕರಣ ದಾಖಲು   

ನವದೆಹಲಿ: ಸಿಬಿಐನ ಮಾಜಿ ನಿರ್ದೇಶಕ, ನಿವೃತ್ತ ಐಪಿಎಸ್‌ ಅಧಿಕಾರಿ ರಂಜಿತ್‌ ಸಿನ್ಹಾ ವಿರುದ್ಧ ಅಧಿಕಾರ ದುರುಪಯೋಗ ಮತ್ತು ಕಲ್ಲಿದ್ದಲು ಹಗರಣದ ತನಿಖೆ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾಂಸ ರಫ್ತು ಉದ್ಯಮಿ ಮೊಯಿನ್‌ ಖುರೇಷಿ ಅವರಿಗೆ ಕಾನೂನುಬಾಹಿರವಾಗಿ ನೆರವಾದ ಆರೋಪದಲ್ಲಿ ಸಿಬಿಐಯ ಇನ್ನೊಬ್ಬ ಮಾಜಿ ನಿರ್ದೇಶಕ ಎ.ಪಿ. ಸಿಂಗ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಾಗಾಗಿ ಮೂರು ತಿಂಗಳ ಅವಧಿಯಲ್ಲಿ ಸಿಬಿಐಯ ಇಬ್ಬರು ಮಾಜಿ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾದಂತಾಗಿದೆ.

ಸಿನ್ಹಾ ವಿರುದ್ಧ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿಯೊಂದು ಶಿಫಾರಸು ಮಾಡಿತ್ತು. ಹಾಗಾಗಿ ಸಿನ್ಹಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಸಿನ್ಹಾ ಅವರು ಅಧಿಕಾರ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಕೋರ್ಟ್‌ ಹೇಳಿತ್ತು.

ಸಿಬಿಐ ತನಿಖೆ ಎದುರಿಸುತ್ತಿರುವ ಹಲವರು ಸಿನ್ಹಾ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಹಲವು ಬಾರಿ ಭೇಟಿಯಾಗಿದ್ದಾರೆ ಎಂಬುದನ್ನು ಸೂಚಿಸುವ ಸಂದರ್ಶಕರ ಪುಸ್ತಕ ಬಹಿರಂಗವಾಗಿತ್ತು. ನಂತರ ಸಿನ್ಹಾ ವಿರುದ್ಧ ಅನುಮಾನ ವ್ಯಕ್ತವಾಗಿತ್ತು. ಭೇಟಿಯಾದವರಲ್ಲಿ ಕಲ್ಲಿದ್ದಲು ಪ್ರಕರಣದ ಆರೋಪಿಗಳು, ಮೊಯಿನ್‌ ಖುರೇಷಿ ಸೇರಿದ್ದಾರೆ ಎಂದು ವರದಿಯಾಗಿತ್ತು.

ವಕೀಲ ಪ್ರಶಾಂತ್‌ ಭೂಷಣ್‌ ಅವರು ಈ ವಿಚಾರವನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಿದ್ದರು.

ಭೇಟಿ ಮಾಡಿದ ಕಳಂಕಿತರು: 2ಜಿ ಹಗರಣದ ಆರೋಪಿ ಮಹೇಂದ್ರ ನಹತಾ 71 ಒಂದು ಬಾರಿ ಸಿನ್ಹಾ ಅವರನ್ನು ಭೇಟಿಯಾಗಿದ್ದರೆ ನೀರಾ ರಾಡಿಯಾ ಟೇಪ್‌ ಹಗರಣ ಮತ್ತು 2ಜಿ ಹಗರಣದಲ್ಲಿ  ವಿಚಾರಣೆಗೆ ಒಳಗಾಗಿರುವ ದೀಪಕ್‌ ತಲ್ವಾರ್‌ 50 ಬಾರಿ ಭೇಟಿಯಾಗಿದ್ದರು.

ಕಲ್ಲಿದ್ದಲು ಹಗರಣದ ಆರೋಪಿ, ಕಾಂಗ್ರೆಸ್‌ ಸಂಸದ ವಿಜಯ್‌ ದರ್ದಾ, 2ಜಿ ಹಗರಣದಲ್ಲಿ ವಿಚಾರಣೆಗೆ ಒಳಗಾಗಿರುವ ಎಸ್ಸಾರ್‌ ಕಂಪೆನಿಯ ಉದ್ಯಮ ವ್ಯವಹಾರಗಳ ಮುಖ್ಯಸ್ಥ ಸುನಿಲ್ ಬಜಾಜ್‌, ಭಾರತೀಯ ವೈದ್ಯಕೀಯ ಮಂಡಳಿ ಮುಖ್ಯಸ್ಥ, ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ  ಕೇತನ್  ದೇಸಾಯಿ ಅವರು ಕೂಡ ಸಿನ್ಹಾ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದರು.

ಆದಾಯ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಖುರೇಷಿ, ಸಿನ್ಹಾ ಅವರನ್ನು 90 ಬಾರಿ ಭೇಟಿಯಾಗಿದ್ದಾನೆ. ಆದರೆ ಸಂದರ್ಶಕರ ದಾಖಲೆ ಪುಸ್ತಕದ ವಿಶ್ವಾಸಾರ್ಹತೆಯನ್ನು ಸಿನ್ಹಾ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.